ಕಾಸರಗೋಡು: ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆ

ಕಾಸರಗೋಡು: ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಯಾಬಜಾರ್‌ ಬಳಿಯ ಚೆರುಗೋಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 19 ವರ್ಷದ ಐಟಿಐ ವಿದ್ಯಾರ್ಥಿ ಅಬ್ದುಲ್ ಶಿಹಾಬ್ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಕರ್ನಾಟಕದವರಾದ ಶಿಹಾಬ್ ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಬಶೀರ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

ಬೆಳಿಗ್ಗೆ ಕುಟುಂಬ ಸದಸ್ಯರು ಕೋಣೆಗೆ ತೆರಳಿದಾಗ ಆತ ಭಾವನಾತ್ಮಕ ತೊಂದರೆ ಅನುಭವಿಸಿರುವ ಸುಳಿವುಗಳು ಗೋಚರಿಸಿದವು ಎಂದು ತಿಳಿಸಲಾಗಿದೆ. ವೈಯಕ್ತಿಕ ಸಂಬಂಧಕ್ಕೆ ಸಂಬಂಧಿಸಿದ ಮಾನಸಿಕ ಒತ್ತಡದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಯ ಕುರಿತು ಮಾಜಿ ಪಂಚಾಯತ್ ಸದಸ್ಯ ರಫೀಕ್ ಅಹಮದ್ ಹೇಳಿಕೆ ನೀಡಿ, “ಶೀಹಾಬ್‌ ಫೋನ್‌ಗೆ ಒಂದೇ ಹುಡುಗಿಯಿಂದ ಪದೇ ಪದೇ ಹಲವು ಸಂದೇಶಗಳು ಬಂದಿವೆ. ಮರಣದ ನಂತರವೂ ಆಕೆಯಿಂದ ಕರೆ ಮಾಡುವಂತೆ, ಮೆಸೇಜ್‌ಗೆ ಉತ್ತರಿಸುವಂತೆ ಕೇಳುವ ಸಂದೇಶಗಳು ಬರುತ್ತಿವೆ. ಆ ಹುಡುಗಿ ಎರ್ನಾಕುಲಂ ಜಿಲ್ಲೆಯವರು ಎಂಬ ಮಾಹಿತಿ ಇದೆ” ಎಂದು ಅವರು ಹೇಳಿದರು.

ಶಿಹಾಬ್‌ ಮೊಬೈಲ್‌ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕುಂಬಳ ಪೊಲೀಸರು ತಿಳಿಸಿದ್ದಾರೆ.

error: Content is protected !!