ಅಡ್ಡಿಯಾಗದ ಕಾಲಿನ ದೌರ್ಬಲ್ಯ‌: ಅಯ್ಯಪ್ಪ ದರ್ಶನಕ್ಕಾಗಿ ಕಾಲ್ನಡಿಗೆಯಲ್ಲೇ ಸಾಗಿ ಬೆಟ್ಟಾರೋಹಣ ಮಾಡಿದ ವೀರಮಣಿಕಂಡನ್

ಶಬರಿಮಲೆ: ದೈಹಿಕ ಅಸಮರ್ಥತೆಯ ಅಡೆತಡೆಗಳನ್ನೇ ಮೆಟ್ಟಿ ನಿಂತು, ದೃಢ ಮನಸ್ಸು ಮತ್ತು ಭಕ್ತಿ ಒಂದಾದಾಗ ಸಾಧ್ಯವಿಲ್ಲದ್ದು ಏನೂ ಇಲ್ಲ ಎಂಬುದಕ್ಕೆ ವೀರಮಣಿಕಂಡನ್ ಸ್ಪಷ್ಟ ಉದಾಹರಣೆ. ಯಾಕೆಂದರೆ ಅವರಿಗೆ ನಡೆಯಲು ಸಾಧ್ಯವಾಗದಿದ್ದರೂ ಶಬರಿಮಲೆಗೆ ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲೇ ಸಂಚರಿಸಿ, ಬೆಟ್ಟ ಏರಿವ ಅಯ್ಯಪ್ಪ ದರ್ಶನ ಪಡೆದು ಪಾವನರಾಗಿದ್ದಾರೆ. ಈ ಬಾರಿ ಅವರ ಮಗ ಪವಿನ್‌ರಾಜ್‌ ಕೂಡಾ ಮೊದಲ ಬಾರಿಗೆ ತಂದೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ ʻವಿಶ್ವ ಅಂಗವಿಕಲ ದಿನʼದಂದೇ ನಡೆದ ಸುದೀರ್ಘ ಯಾತ್ರೆಯಾಗಿತ್ತು.

ತಮಿಳುನಾಡು ಮೂಲದ ವೀರಮಣಿಕಂಡನ್ ಕಳೆದ 40 ವರ್ಷಗಳಿಂದ ಕೊಲ್ಲಂ ಜಿಲ್ಲೆಯ ಕಡಕ್ಕಲ್‌ನಲ್ಲಿ ವಾಸಿಸುತ್ತಿದ್ದಾರೆ. ಮನೆ–ಮನೆಗೆ ತೆರಳಿ ಸೋಪ್ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಕುಟುಂಬವನ್ನು ನಿಭಾಯಿಸುತ್ತಿದ್ದಾರೆ.

ದುರದೃಷ್ಟವೆಂದರೆ ಅವರಿಗೆ ಬಲಗಾಲಿನ ದೌರ್ಬಲ್ಯದಿಂದ ದೂರ ನಡೆದು ಹೋಗುವುದೂ ಕಷ್ಟ. ಆದರೂ ಮಕರವಿಳಕ್ಕು ಅವಧಿಯಲ್ಲಿ ಅಯ್ಯಪ್ಪ ದರ್ಶನ ಪಡೆಯಲು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಇಂದಿನವರೆಗೆ ಅವರು 20 ಕ್ಕೂ ಹೆಚ್ಚು ಬಾರಿ ಶಬರಿಮಲೆಗೆ ಭಕ್ತಿಯಾತ್ರೆ ಮಾಡಿದ್ದಾರೆ. ಹೆಚ್ಚಿನ ಬಾರಿ ಅಝುತ ಮೂಲಕವೇ ಎರುಮೇಲಿಯನ್ನು ಏರಿದ್ದಾರೆ.

ಈ ಬಾರಿಯ ಯಾತ್ರೆಯನ್ನು ಅವರು ಕಳೆದ ಸೋಮವಾರ ಬೆಳಿಗ್ಗೆ ಎರುಮೇಲಿಯಿಂದ ಪ್ರಾರಂಭಿಸಿ, ಮಂಗಳವಾರ ಸಂಜೆ ಪಂಪಾ ತಲುಪಿದರು. ಬುಧವಾರ ಬೆಳಿಗ್ಗೆ ದರ್ಶನ ಪಡೆದ ಬಳಿಕ ಮಧ್ಯಾಹ್ನದ ವೇಳೆಗೆ ಬೆಟ್ಟ ಇಳಿದರು. ಅವರೊಂದಿಗೆ ಸಹೋದರನ ಮಗ ಅನಂತಕೃಷ್ಣನ್ ಇದ್ದರು. ವೀರಮಣಿಕಂಡನ್ ಅವರ ಮಗಳು ಅಕ್ಷಯಾ ಕೂಡ ನಾಲ್ಕು ವರ್ಷಗಳ ಹಿಂದೆ ಶಬರಿಮಲೆಗೆ ದರ್ಶನಕ್ಕೆ ಬಂದಿದ್ದರು.

ಭಕ್ತಿ, ಧೈರ್ಯ ಮತ್ತು ಮಾನಸಿಕ ಬಲವು ಇದ್ದರೆ ಅಂಗವೈಕಲ್ಯತೆ ಎನ್ನುವುದು ದೇಹದ ಮಿತಿಯನ್ನೇ ಮೀರಿ ಸಾಗುತ್ತದೆ ಎಂಬುದಕ್ಕೆ ವೀರಮಣಿಕಂಡನ್ ಅವರ ದಿವ್ಯಯಾತ್ರೆ ಮತ್ತೊಂದು ಮೌನ ಸಾಕ್ಷಿಯಾಗಿದೆ.

error: Content is protected !!