
ತಮಿಳುನಾಡು: ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಒಂಟಿಯಾಗಿದ್ದ ತೆಲುಗು ನಟಿ ಸಮಂತಾ ರುತ್ ಪ್ರಭು ಇದೀಗ ನಿರ್ದೇಶಕ ರಾಜ್ ನಿಡಿಮೋರು ಜೊತೆ ಹೊಸ ವೈವಾಹಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ದಿನಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಬಗ್ಗೆ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ಜೋಡಿಯಾಗಿ ತೆರೆ ಎಳೆದಿದ್ದಾರೆ.

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಸೋಮವಾರ ಬೆಳಿಗ್ಗೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಶನ್‌ನ ಲಿಂಗ ಭೈರವಿ ದೇವಸ್ಥಾನದಲ್ಲಿ ವಿವಾಹವಾಗಿದ್ದು, ವಿವಾಹಕ್ಕಾಗಿ ಭಾನುವಾರ ಸಂಜೆಯೇ ಅವರು ಕೊಯಮತ್ತೂರಿಗೆ ಆಗಮಿಸಿದರು ಎನ್ನಲಾಗಿದೆ. ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, 🤍01.12.2025🤍 ಎಂದು ಬರೆದುಕೊಂಡಿದ್ದಾರೆ. ಸಮಂತಾ ಪೋಸ್ಟ್‌ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ಹಲವಾರು ಮಂದಿ ಶುಭಾಶಯ ಕೋರಿದ್ದಾರೆ.


‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ಹಾಗೂ ರಾಜ್ ನಿಡಿಮೋರು ಅವರು ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಅವರಿಬ್ಬರ ನಡುವೆ ಆಪ್ತತೆ ಬೆಳೆಯಿತು. ಜೊತೆಯಾಗಿ ಈಗ ಹೊಸ ಜೀವನ ಆರಂಭಿಸಿದ್ದಾರೆ.
