ಪುತ್ತೂರು: ಸ್ಥಳೀಯರ ಸಹಕಾರದಿಂದಾಗಿ ಐದು ಜಾನುವಾರುಗಳು ರಕ್ಷಿಸಲ್ಪಟ್ಟ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯ ನರಿಮೊಗರು ಎಂಬಲ್ಲಿ ನ.29ರಂದು ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ (26) ಮತ್ತು ಅಬ್ದುಲ್ ಲತೀಫ್ (25) ಬಂಧಿತ ಆರೋಪಿಗಳು.

ಘಟನೆಯ ವಿವರ: ನವೆಂಬರ್ 29, 2025ರ ಬೆಳಿಗ್ಗೆ, ಯಾರೋ ಅಪರಿಚಿತರು ಜಾನುವಾರುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ವಾಹನ ದುರಸ್ತಿಗೀಡಾಗಿದ್ದರಿಂದ, ಪುತ್ತೂರು ನರಿಮೊಗರು ಪ್ರದೇಶದ ನಡುರಸ್ತೆಯಲ್ಲಿ 4 ಕರುಗಳು ಮತ್ತು 1 ದನವನ್ನು ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಪುತ್ತೂರು ಪಾಣಾಜೆ ನಿವಾಸಿ ಪ್ರೇಮ್ರಾಜ್ ಎಂಬವರ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಜಾನುವಾರು ಸಾಗಣೆ ಪ್ರಕರಣ ದಾಖಲಾಗಿತ್ತು. ಸ್ಥಳೀಯರ ಸಹಕಾರದಿಂದ ದೂರುದಾರರು ಗೋವುಗಳನ್ನು ಠಾಣೆಗೆ ಹಸ್ತಾಂತರಿಸಿದರು.
ದೂರಿನ ಆಧಾರದ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 117/2025 ಅಡಿಯಲ್ಲಿ, ಕಲಂ 4, 5, 12 – ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ, ಕಲಂ 303(1) BNS–2023 ಹಾಗೂ ವಿಧಾನ 106 BNSS–2023ರಂತೆ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ವೇಳೆ, ಉಳ್ಳಾಲ ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ ಮತ್ತು ಅಬ್ದುಲ್ ಲತೀಫ್ ಕೆಎ–52–4889 ನೋಂದಣಿಯ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು ಎಂಬುದು ಬಹಿರಂಗವಾಯಿತು. ವಾಹನ ಕೆಟ್ಟದನ್ನು ಗಮನಿಸಿದ ಆರೋಪಿಗಳು, ಜಾನುವಾರುಗಳನ್ನು ರಸ್ತೆಯಲ್ಲಿ ಬಿಟ್ಟು, ಕಾರಿನೊಂದಿಗೆ ಪರಾರಿಯಾಗಿದ್ದರು.
ಪೊಲೀಸರು ಆರೋಪಿಗಳನ್ನು ಹಾಗೂ ವಶಪಡಿಸಿದ ಇನ್ನೋವಾ ಕಾರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
