ಬಿಳಿಮಲೆಯನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಲು ಭರತ್‌ ಶೆಟ್ಟಿ ಆಗ್ರಹ, ಕಲಾವಲಯಕ್ಕೆ ಬಾಂಬ್‌ ಬಿದ್ದಿದೆ ಎಂದ ಅಶೋಕ್‌ ಶೆಟ್ಟಿ ಸರಪಾಡಿ

ಮಂಗಳೂರು: ಯಕ್ಷಗಾನ ಕಲಾವಿದರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಪ್ರೊ. ಪುರುಷೋತ್ತಮ್ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಬೇಕು, ಅವರ ವಿರುದ್ಧ ಸುಮೋಟೋ ಕೇಸ್‌ ದಾಖಲಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್‌ ಶೆಟ್ಟಿ ಆಗ್ರಹಿಸಿದ್ದಾರೆ.

ʻಯಕ್ಷಗಾನ ಕಲಾವಿದರು ಸಲಿಂಗಿಗಳಾಗಿದ್ದರುʼ ಎಂಬ ಪುರುಷೋತ್ತಮ ಬಿಳಿಮಲೆಯ ಹೇಳಿಕೆಯನ್ನು ಖಂಡಿಸಿ, ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ  ಯಕ್ಷಗಾನ ಕಲಾವಿದರ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಬಿಳಿಮಲೆ ಹೇಳಿಕೆಯಿಂದ ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ, ಇಡೀ ಕರಾವಳಿಯ ಜನತೆಗೆ ನೋವಾಗಿದೆ. ದ.ಕ., ಉಡುಪಿ ಹಾಗೂ ಕಾಸರಗೋಡಿನಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಹಿರಿಮೆ ಇದೆ. ಕಟೀಲು, ಮಂದಾರ್ತಿ ಮುಂತಾದ ದೇವಸ್ಥಾನಗಳು ಯಕ್ಷಗಾನ ಆಡಿಸಿಕೊಂಡು ಬರ್ತಿವೆ. ಯಕ್ಷಗಾನ ಕಲಾವಿದರು ದೇವರ ಪ್ರಸಾದ ಸ್ವೀಕರಿಸಿ, ವೃತಾಚರಣೆ ಮಾಡಿ ಗೆಜ್ಜೆ ಕಟ್ಟುತ್ತಾರೆ. ಚೌಕಿಯಲ್ಲಿ ದೇವರ ಪ್ರಸಾದ ಸ್ವೀಕರಿಸಿ ರಂಗಕ್ಕೆ ಹೋಗುವ ಪರಂಪರೆ ಇದೆ. ದೇವಿ ರಂಗಸ್ಥಳಕ್ಕೆ ಬರುವಾಗ ಎದ್ದು ನಿಂತು ಗೌರವಿಸುತ್ತಾರೆ. ದೇವರಿಗೂ ಯಕ್ಷಗಾನಕ್ಕೂ ಒಂದು ರೀತಿಯ ಬೆಸುಗೆ ಇದೆ. ಆದರೆ ಕರ್ನಾಟಕ ಸರ್ಕಾರ ತನ್ನ ಕೈಗೊಂಬೆಗಳ ಮೂಲಕ ಪರಂಪರೆಯ ಬಗ್ಗೆ ಅವಹೇಳನ ಮಾಡಿಸುತ್ತಿದೆ ಎಂದು ಆರೋಪಿಸಿದರು.

ಬಿಳಿಮಳೆ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೈ ನಾಯಕರು ಕೂಡ ಕಟೀಲು ಮೇಳದಿಂದ ಯಕ್ಷಗಾನ ಆಡಿಸ್ತಾರೆ. ಆದರೆ ಒಬ್ಬನೇ ಒಬ್ಬ ಕೈ ನಾಯಕ ಬಿಳಿಮಲೆ ಹೇಳಿಕೆಯನ್ನು ಖಂಡಿಸಿಲ್ಲ ಎಂದು ಆರೋಪಿಸಿದರು.

ಮಿಲಿಟರಿಯಲ್ಲಿ ಜಾತಿ ನೋಡಿದ, ಮಿಲಿಟರಿಯಲ್ಲಿ ಹುತಾತ್ಮರಾದ ಸೈನಿಕರ ಜಾತಿ ಯಾವುದು ಎಂದು ಪ್ರಶ್ನಿಸಿದ ತಂಡದಿಂದ ಇದೀಗ ಯಕ್ಷಗಾನ ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ ಬಂದಿದೆ. ಬೇರೆ ಯಾರದ್ರೂ ಮಾತಾಡಿದ್ರೆ ಪೊಲೀಸರು ಸುಮೊಟೋ ಕೇಸ್‌ ದಾಖಲಿಸ್ತಾರೆ. ಆದರೆ ಬಿಳಿಮಲೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ಅಧಿಕಾರ ದುರುಪಯೋಗ ಮಾಡಿ ಕಲಾವಿದರಿಗೆ ನೋವು ನೀಡಿದ್ದಾರೆ. ನಾವೂ ಕೂಡ ಲೀಗಲ್ ಅವಕಾಶ ನೋಡಿ ಲಾಯರ್ ಜೊತೆ ಮಾತಾಡಿ ಕೇಸ್‌ ಹಾಕುತ್ತೇವೆ ಎಂದು ಎಚ್ಚರಿಸಿದರು.

ಕಲಾವಲಯಕ್ಕೆ ಬಾಂಬ್‌ ಬಿದ್ದಿದೆ: ಅಶೋಕ್‌ ಶೆಟ್ಟಿ ಸರಪಾಡಿ 


ಪುರುಷೋತ್ತಮ ಬಿಳಿಮಲೆ ಹೇಳಿಕೆಯನ್ನು ಯಕ್ಷಗಾನ ಕಲಾವಿದ, ಬಿಜೆಪಿಯ ಸಾಂಸ್ಕೃತಿ ಪ್ರಕೋಷ್ಠದ ಅಶೋಕ್‌ ಶೆಟ್ಟಿ ಸರಪಾಡಿ ಅವರು ಬಾಂಬ್‌ಗೆ ಹೋಲಿಸಿದ್ದಾರೆ. ಬಿಳಿಮಲೆ ತಮಗೂ ಅಂತಹ ಅನುಭವ ಆಗಿದ್ದರೆ, ವ್ಯಕ್ತಿಗತವಾಗಿ ಹೇಳಿದ್ದರೆ ನಾವು ಕೇಳ್ತಿರಲಿಲ್ಲ. ನನ್ನ ಅನುಭವದಲ್ಲಿ ಇದುವರೆಗೆ ಈ ರೀತಿ ಆಗಿಲ್ಲ. ಕರಾವಳಿ ಸಿದ್ಧಾಂತ ಇರುವ ಸ್ಥಳವಾಗಿದೆ. ಆದರೆ ಯಕ್ಷಗಾನದ ಪಾವಿತ್ರ್ಯತೆಯನ್ನು ಪ್ರಶ್ನಿಸಿ ಅದರ ಬಗ್ಗೆ ಜನಮಾನಸದಲ್ಲಿ ಇರುವ ಪೂಜ್ಯ ಭಾವನೆ, ಸಿದ್ಧಾಂತವನ್ನು ಬದಲಿಸುವ ಯತ್ನವಾಗಿದೆ ಎಂದು ಆರೋಪಿಸಿದರು.

ಯಕ್ಷಗಾನ ಕಲಾವಿದರು ವೃತಧಾರಿಗಳಂತಿರುವವರು‌. ಸಮಾಜಕ್ಕೆ ಸಂದೇಶ‌ಕೊಡುವ ಒಂದು ಮಾಧ್ಯಮ ಹಾಗೂ ಆರಾಧನ ಕಲೆ. ಆದರೆ ಆ ಕಲಾವಲಯಕ್ಕೆ ಬಾಂಬ್ ಬಿದ್ದಿದ್ದು, ಅದೀಗ ಸಿಡಿದಿದೆ. ಇದರಿಂದ ನಮಗೆ ಆಘಾತವಾಗಿದೆ. ಅವರು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಯಕ್ಷಗಾನ ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನು ನೆನಪಿಸಬೇಕು. ಕಲೆಯನ್ನು ಆರಾಧಿಸುವವರು ನಮ್ಮನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ಬಿಳಿಮಲೆ ಕಲಾವಿದರ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಕೆಲವರು ಆತ್ಮಕಥೆಯಲ್ಲಿ ಬರೆದಿರಬಹುದು. ಹಾಗೆಂದು ಎಲ್ಲಾ ಕಲಾವಿದರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ನಾವು ಪ್ರಾಮಾಣಿಕ ಕಲಾವಿದರು. ಬಿಳಿಮಲೆ ಯಕ್ಷಗಾನಕ್ಕೆ ಅಪಚಾರ ಮಾಡಿದ್ದು ಇದು ಖಂಡನಾರ್ಹ. ಅವರು ಕಲಾಸರಸ್ವತಿಯ ಶಿಕ್ಷೆ ಅನುಭವಿಸಲೇಬೇಕು ಎಂದು ನನ್ನ ಪ್ರಾರ್ಥನೆಯಾಗಿದೆ ಎಂದರು.

, ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಸತೀಶ್‌ ಶೆಟ್ಟಿ, ಬಿಜೆಪಿ ವಕ್ತಾರ ಅರುಣ್‌ ಜಿ. ಶೇಟ್‌ ಉಪಸ್ಥಿತರಿದ್ದರು.

error: Content is protected !!