ಮದೀನಾ: ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮದೀನಾ ಸಮೀಪ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 42 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಸಾವನ್ನಪ್ಪಿದವರಲ್ಲಿ ಹಲವರು ಭಾರತೀಯರು, ಮುಖ್ಯವಾಗಿ ತೆಲಂಗಾಣದ ಹೈದರಾಬಾದ್‌ನವರಿರುವುದು ವರದಿಯಾಗಿದೆ.

ಘಟನೆ ಭಾರತೀಯ ಕಾಲಮಾನ ಬೆಳಗಿನ ಜಾವ 1.30ರ ಸುಮಾರಿಗೆ ಮುಫ್ರಿಹತ್ ಬಳಿ ನಡೆದಿದೆ. ಮೆಕ್ಕಾದಿಂದ ಧಾರ್ಮಿಕ ವಿಧಿಗಳನ್ನು ಮುಗಿಸಿ ಮದೀನಾಕ್ಕೆ ಹಿಂತಿರುಗುತ್ತಿದ್ದ ಈ ಗುಂಪಿನ ಬಸ್ ಡಿಕ್ಕಿ ನಂತರ ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಅಪಘಾತ ಸಂಭವಿಸಿದ ಸಮಯದಲ್ಲಿ ಅನೇಕರು ನಿದ್ರಿಸುತ್ತಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಗಲ್ಫ್ ನ್ಯೂಸ್ ವರದಿ ತಿಳಿಸಿದೆ.

11 ಮಹಿಳೆಯರು ಮತ್ತು 10 ಮಕ್ಕಳು ಸೇರಿ ಅನೇಕರು ಬೆಂಕಿಯಲ್ಲಿ ಸುಟ್ಟುಕೊಂಡು ಮೃತಪಟ್ಟಿದ್ದಾರೆ. ಬಸ್ ಸಂಪೂರ್ಣ ಸುಟ್ಟುಹೋಗಿರುವುದರಿಂದ ಗುರುತಿಸುವಿಕೆಗೆ ದೊಡ್ಡ ಸವಾಲು ಎದುರಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಒಬ್ಬರಾದ ಮೊಹಮ್ಮದ್ ಅಬ್ದುಲ್ ಶೋಯಾಬ್ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಹೇಗಿದೆ ಎಂದು ತಿಳಿದುಬಂದಿಲ್ಲ.

ಸಹಾಯವಾಣಿ ಆರಂಭ
ಈ ದುರಂತದ ನಂತರ ತೆಲಂಗಾಣ ಸರ್ಕಾರವು ತಕ್ಷಣ ಕ್ರಮ ಕೈಗೊಂಡಿದ್ದು, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿದೆ. ರಾಜ್ಯದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಸಹಾಯಕ್ಕಾಗಿ ಸಂಪರ್ಕ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ: +91 7997959754 , +91 9912919545 ಜೆಡ್ಡಾದ ಭಾರತೀಯ ರಾಯಭಾರ ಕಚೇರಿಯೂ 24×7 ನಿಯಂತ್ರಣ ಕೊಠಡಿಯೊಂದಿಗೆ 8002440003ಟೋಲ್–ಫ್ರೀ ಸಹಾಯವಾಣಿ ಪ್ರಾರಂಭಿಸಿದೆ.

ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ ಅವರು ಈ ದುರಂತ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಹೈದರಾಬಾದ್ ಮೂಲದ ಎರಡು ಟ್ರಾವೆಲ್ ಏಜೆನ್ಸಿಗಳ ಮೂಲಕ ಪ್ರಯಾಣಿಸಿದ್ದ 16 ಮಂದಿಯೂ ಸಾವಿನ ಶಂಕೆ ವ್ಯಕ್ತವಾಗಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದು, ಎಲ್ಲಾ ಪ್ರಭಾವಿತರಿಗೂ ಭಾರತ ಸರ್ಕಾರ ಅಗತ್ಯ ಸಹಾಯ ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ. ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.