ಬೆಂಗಳೂರು: ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಕಳೆದ ಶನಿವಾರ ವರದಿಯಾಗಿದ್ದ ಮಹಿಳೆಯ ಅಸಹಜ ಸಾವಿನ ಪ್ರಕರಣಕ್ಕೆ ತಿರುವು ದೊರೆತಿದೆ.

ನೇತ್ರಾವತಿ (34) ಮೃತ ಮಹಿಳೆ.
ನೇತ್ರಾವತಿಯವರ ಮಗಳು ಮತ್ತು ಆಕೆಯ ಪ್ರಿಯಕರ ಸೇರಿದಂತೆ ಐದು ಅಪ್ರಾಪ್ತರು ಈ ಕೊಲೆಗೆ ಕಾರಣರೆಂದು ಸುಬ್ರಹ್ಮಣ್ಯಪುರ ಪೊಲೀಸರು ಬಹಿರಂಗಪಡಿಸಿದ್ದಾರೆ.

ನೇತ್ರಾವತಿಯ ಮಗಳು ಕೆಲ ಕಾಲದಿಂದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ಶನಿವಾರ ರಾತ್ರಿ ಪ್ರಿಯಕರ ಹಾಗೂ ಅವನ ಮೂವರು ಸ್ನೇಹಿತರೊಂದಿಗೆ ಮನೆಗೆ ಬಂದಿದ್ದಳು. ರಾತ್ರಿ ವೇಳೆ ನೇತ್ರಾವತಿ ಮಲಗಿದ್ದಾಗ ಅವರಿಗೆ ತಿಳಿಯದಂತೆ ಮನೆಗೆ ಬಂದಿದ್ದರು. ಇದರಿಂದ ಅವರ ವರ್ತನೆ ನೋಡಿ ಆಕ್ರೋಶಗೊಂಡು ನೇತ್ರಾವತಿ ಬೈದಿದ್ದಾರೆ. ಈ ವೇಳೆ ಜಗಳ ತೀವ್ರಗೊಂಡಿದ್ದು, ಕೋಪಗೊಂಡ ಮಗಳು ಹಾಗೂ ಆಕೆಯ ಸ್ನೇಹಿತರು ನೇತ್ರಾವತಿಯ ಬಾಯಿ ಮುಚ್ಚಿ ಟವಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.

ಕೊಲೆಯ ನಂತರ, ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿಗಳು ನೇತ್ರಾವತಿಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತುಹಾಕಿ ಮನೆ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಮರುದಿನ ನೇತ್ರಾವತಿ ಶವ ಪತ್ತೆಯಾದ ನಂತರ ಪೊಲೀಸರು ಪ್ರಾಥಮಿಕವಾಗಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಶವ ಸಂಸ್ಕಾರಕ್ಕೂ ನೇತ್ರಾವತಿಯ ಮಗಳು ಹಾಜರಾಗದಿದ್ದರಿಂದ ಕುಟುಂಬದಲ್ಲಿ ಅನುಮಾನ ಹುಟ್ಟಿತು. ಬಳಿಕ ನೇತ್ರಾವತಿಯ ಅಕ್ಕ ಮಗಳ ನಾಪತ್ತೆ ಕುರಿತಂತೆ ದೂರು ನೀಡಿದ್ದರು.
ಪೊಲೀಸರು ವಿಚಾರಣೆ ಆರಂಭಿಸಿ ಮಗಳ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ, ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಸ್ತುತ ಸುಬ್ರಮಣ್ಯಪುರ ಪೊಲೀಸರು ಐವರನ್ನೂ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.