ಮಂಗಳೂರು: ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ನಡೆದ ದುಂದುವೆಚ್ಚ ಹಾಗೂ ಭ್ರಷ್ಟಾಚಾರ ಕುರಿತು ಮಾಡಿದ ಆರೋಪಗಳಿಗೆ ಸ್ಪೀಕರ್ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ರೈಟಿಂಗ್‌ನಲ್ಲಿ ಕೊಟ್ಟರೆ ಅದಕ್ಕೆ ಸೂಕ್ತ ಉತ್ತರ ಕೊಡ್ತೇನೆ. ಎಲ್ಲಿಯೋ ಕೂತು ಆರೋಪ ಮಾಡಿದ ತಕ್ಷಣ ಅದಕ್ಕೆ ಉತ್ತರ ಕೊಡಲು ನಾನೇನು ಅವರ ಜನ ಅಲ್ಲ. ನಾಳೆ ನಾನು ಸ್ಪೀಕರ್ ಕಚೇರಿಯಲ್ಲಿಯೇ ಇರ್ತೇನೆ. ಅವರು ಅಲ್ಲಿಗೆ ಬರಲಿ. ಚರ್ಚೆಗೆ ನಾನೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ನಾನು ಕೂಡ ಎಲ್ಲವನ್ನೂ ಗಮನಿಸಿದ್ದೇನೆ. ಅಸೂಯೆಗೆ ಮದ್ದಿಲ್ಲ. ಹೊಸತೊಂದು ಮನೆ, ಬಿಲ್ಡಿಂಗ್ ಕಟ್ಟುವಾಗ ಅದಕ್ಕೆ ದೃಷ್ಟಿ ಬೀಳಬಾರದು ಅಂತ ಒಂದು ದೃಷ್ಟಿಬೊಂಬೆಯನ್ನು ಆ ಕಟ್ಟಡದ ಮುಂದೆ ಕಟ್ತಾರೆ. ಇದೀಗ ಕರ್ನಾಟಕದ ಲಿಜಿಸ್ಲೇಚರ್(ಶಾಸಕಾಂಗ) ಕರ್ನಾಟಕ ರಾಜ್ಯದಲ್ಲಿ ಸರ್ವರ ಮೆಚ್ಚುಗೆ ಮಾತ್ರವಲ್ಲ, ನಮ್ಮ ದೇಶದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕರ್ನಾಟಕದ ಪರಿಚಯ, ಗೌರವ ಸಿಗ್ತಾ ಇದೆ. ಇದಕ್ಕಾಗಿ ಮಾಜಿ ಸ್ಪೀಕರ್ ಆರೋಪಗಳು ನಮ್ಮ ಲಿಜಿಸ್ಲೇಚರ್‌ಗೆ ಒಂದು ದೃಷ್ಟಿಬೊಂಬೆಯ ಆರೋಪವಾ ಅಂತ ಕೇಳ್ಳಿಕ್ಕೆ ಬಯಸ್ತಾ ಇದ್ದೇನೆ ಎಂದರು.
ಅಭಿವೃದ್ಧಿ ಅದು ನಿರಂತರ. ಅದು ಹಂತಹಂತವಾಗಿ ಆಗ್ಲೇಬೇಕು. ಅದನ್ನು ನಾನು ಮಾಡ್ತಾ ಇರ್ತೇನೆ. ಯಾರಿಗಾದ್ರೂ ಅದ್ರ ಬಗ್ಗೆ ಸಂಶಯಗಳಿದ್ರೆ ನಾಳೆ ಬೆಳಿಗ್ಗೆ ನಾನು ನನ್ನ ಕಚೇರಿಯಲ್ಲಿ ಇರ್ತೇನೆ. ಅವರೆಲ್ಲರೂ ನನ್ನ ಕಚೇರಿಗೆ ಬಂದು ರೈಟಿಂಗ್‌ನಲ್ಲಿದೆಯೋ ಅದನ್ನು ಅವರಿಗೆ ಕೊಟ್ಟು ಅವರ ಸಂಶಯವನ್ನು ನಿವಾರಿಸಿ ಅದರ ಬಗ್ಗೆ ಸಕರಾತ್ಮಕವಾದ ಚರ್ಚೆಗೆ ನಾನು ಕೂಡ ಅವರೊಟ್ಟಿಗೆ ಇದ್ದೇನೆ. ಅವರು ಕೂಡಾ ಜವಾಬದ್ದಾರಿ ಸ್ಥಾನದಲ್ಲಿರುವವರು. ಸದನದ ಈಗಿರುವ ಗೌರವ ಉಳಿಸ್ತೇನೆ ಎಂದರು.
ಎಲ್ಲಿಯೋ ಕೂತು ಶಾಸಕರು, ಸಂಸದರು ಮಾತಾಡಿದ್ರೆ ಅದಕ್ಕೆ ನಾನು ಹೇಗೆ ಉತ್ತರ ಕೊಡ್ಲಿ? ನನಗೂ ಮಾತಾಡ್ಲಿಕ್ಕೆ ಗೊತ್ತಿದೆ. ಮೊದಲು ಕ್ಷೇತ್ರದ ಜನರೊಂದಿಗೆ ಮಾತುಕತೆ ನಡೆಸಿ ಮುಂದುವರಿಯುತ್ತೇನೆ. ಅವರು ರೈಟಿಂಗ್‌ನಲ್ಲಿ ಕೊಟ್ರೆ ಅದಕ್ಕೆ ಸೂಕ್ತ ಉತ್ತರ ಕೊಡುತ್ತೇನೆ. ಎಲ್ಲಿಯೋ ಕೂತು ಆರೋಪ ಮಾಡಿದ್ರೆ ಉತ್ತರ ಕೊಡಲು ನಾನೇನು ಅವರ ಜನ ಅಲ್ಲ. ಏನು ವಿಚಾರ ಇದೆಯೋ ಹಿಂದೆಯೋ ಮುಂದೆಯೋ ಗೊತ್ತಿಲ್ಲ ಹೇಳ್ಳಿಕ್ಕೆ ಬಹಳ ಇದೆ ಎಂದು ಖಾದರ್ ನುಡಿದರು.
ನಾನೂ ಒಂದು ಪಕ್ಷದಿಂದ ಬಂದವನಾಗಿದ್ದು, ನಾನೂ ಕೂಡಾ ಆ ಪಕ್ಷದ ವತಿಯಿಂದ ಮಾತಾಡ್ಬಹುದು. ಆದರೆ ನಾನು ಸಂವಿಧಾನ ಹುದ್ದೆಯಲ್ಲಿದ್ದೇನೆ. ಹಾಗಾಗಿ ಆ ರೀತಿ ಮಾತಾಡಲ್ಲ. ಸದನ ರೆಸಾರ್ಟ್ ಮಾಡಿದ್ದಾರೆ ಅಂತಿದ್ರೆ ಅದನ್ನು ಅವರಲ್ಲೇ ಕೇಳಿ ನನ್ನನ್ನು ಯಾಕೆ ಕೇಳ್ತೀರಿ? ಶಾಸಕರಿಗೆ ಸೌಲಭ್ಯ ಕೊಡುವುದು ನನ್ನ ಕರ್ತವ್ಯ. ಮುಂದಕ್ಕೂ ಮಾಡ್ತೇನೆ. ನನಗೆ ಡ್ಯಾಮೇಜ್ ಮಾಡಿ ಅವರು ಸಂತೋಷ ಪಡುವುದಾದರೆ ನನಗೆ ಬೇಸರ ಇಲ್ಲ. ಇಂಥಾ ಆರೋಪ ಫಸ್ಟಾ? ನಾನು ಶಾಸಕನಾಗಿದ್ದಾಗಿನಿಂದ ಆರೋಪ ಕೇಳ್ತಾ ಇದ್ದೇನೆ ಎಂದು ತಿರುಗೇಟು ನೀಡಿದರು.

