ಮಂಗಳೂರು : ರಾಜ್ಯದ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಭಿಮಾನಿ ಬಳಗದ ವತಿಯಿಂದ ಕೊಡಿಕಲ್ ನಲ್ಲಿ “ದೀಪಾವಳಿ ಸೌಹಾರ್ದ ಸಂಜೆ” ಆಯೋಜಿಸಲಾಗಿತ್ತು.

ಕರಾವಳಿಯ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಊಟೋಪಚಾರಗಳಿಂದ ಸಜ್ಜಾಗಿದ್ದ ಈ ಸಂಜೆ, ನೆರೆದಿದ್ದ ಎಲ್ಲಾ ಪ್ರಮುಖರು ಮತ್ತು ನಾಗರಿಕರನ್ನು ಸಂಭ್ರಮಿಸುವಂತೆ ಮಾಡಿತು. ದೀಪಾವಳಿ ಆಚರಣೆಯ ಭಾಗವಾಗಿ ಗೋಪೂಜೆ, ಸುಡುಮದ್ದು ಪ್ರದರ್ಶನ ಮತ್ತು ಬೃಹತ್ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಗಳಾಗಿದ್ದವು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಅವರು ಸ್ವತಃ ಗೋಪೂಜೆಯನ್ನು ನೆರವೇರಿಸಿ ಸೌಹಾರ್ದತೆಯ ಸಂದೇಶ ನೀಡಿದರು. ಅವರು ತಮ್ಮ ಭಾಷಣದಲ್ಲಿ, “ರಾಜ್ಯದಲ್ಲಿ ಎಲ್ಲಾ ಜಾತಿ ಮತದವರು ಪರಸ್ಪರ ಸೌಹಾರ್ದತೆಯಿಂದ ಬಾಳಬೇಕು ಮತ್ತು ರಾಜ್ಯದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಕೊಡುಗೆ ನೀಡಬೇಕು” ಎಂದು ಒತ್ತಿಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯೊಂದಿಗೆ ದೀಪಾವಳಿಯನ್ನು ಆಚರಿಸುವ ಮೂಲಕ ಮಾನವೀಯ ಸಂಬಂಧಗಳು ವೃದ್ಧಿಯಾಗಬೇಕು ಎಂಬುದು ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಕೊಡಿಕಲ್ ಪ್ರದೇಶದಲ್ಲಿ ಸೌಹಾರ್ದ ದೀಪಾವಳಿ ಸಂಜೆ ಆಯೋಜಿಸಿರುವುದು ಸಂತಸದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ದೀಪಾವಳಿಯ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ ಶುಭಾಶಯಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮರಾಜ್ ಪೂಜಾರಿ, ಸುರೇಂದ್ರ ಕಂಬಳಿ, ಬಿ. ಲ್ ಪದ್ಮನಾಭ, ಬಿ ಲ್ಲವ ಮಹಾಮಂಡಲದ ರಾಷ್ಟ್ರೀಯ ಪ್ರಮುಖರಾದ ಸೂರ್ಯಕಾಂತ್ ಸುವರ್ಣ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರಿ ಅಪ್ಪಿ,ಮಲ್ಲಿಕಾರ್ಜುನ್, ಸ್ಥಳೀಯ ಮಸೀದಿಯ ಧರ್ಮ ಗುರುಗಳಾದ ಮಜುಕ್ ಝುಹಾರಿ, ಸೌಹಾರ್ದ ಪಾವಳಿ ಸಂಜೆಯ ಆಯೋಜಕರಾದ ಪಾಂಡುರಂಗ ಕುಕ್ಯಾನ್, ಚಂದ್ರಹಾಸ ಪೂಜಾರಿ, ಉದಯ ಬಂಗೇರ, ಪ್ರಮುಖರಾದ ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪುರುಷೋತ್ತಮ್ ಚಿತ್ರಾಪುರ ಸ್ವಾಗತಿಸಿದರು, ರೆಹಮಾನ್ ಖಾನ್ ಕುಂಜತ್ತ ಬೈಲು ವಂದಿಸಿದರು. ಪ್ರಿಯಾ ಶೆಟ್ಟಿ ನಿರೂಪಿಸಿದರು.