ಉಮೇಶ್ ಮಿಜಾರ್ ಅವರ ನೂತನ ಕೃತಿ “ವೈರಲ್ ವೈಶಾಲಿ” ರಂಗಭೂಮಿಗೆ ಸಮರ್ಪಣೆ

ಮಂಗಳೂರು: ತುಳು ರಂಗಭೂಮಿಯಲ್ಲಿ ಇವತ್ತು ಅನೇಕ ನಾಟಕ ತಂಡಗಳಿವೆ. ನೂರಾರು ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶಭರಿತ ನಾಟಕಗಳು ಕೂಡಾ ದೊರೆಯುತ್ತದೆ. ಮಂಗಳೂರು, ಉಡುಪಿ, ಕಾಪು, ಕಾಸರಗೋಡು, ಮಂಜೇಶ್ವರದಲ್ಲೇ ಹಲವಾರು ನಾಟಕ ತಂಡಗಳಿವೆ. ಈ ಮಧ್ಯೆ ಮೂಡಬಿದ್ರೆಯಲ್ಲಿ ಉಮೇಶ್ ಮಿಜಾರ್ ನೇತೃತ್ದವ “ನಮ್ಮ ಕಲಾವಿದರು ಬೆದ್ರ” ತಂಡ ಪ್ರತೀವರ್ಷ ನಾಟಕಗಳನ್ನು ಪ್ರದರ್ಶನ ನೀಡುವ ಮೂಲಕ ಇತರ ತಂಡಗಳಿಗೆ ಪ್ರತಿಸ್ಪರ್ಧಿಯಂತೆ ಬೆಳೆದಿದೆ.

ಉಮೇಶ್ ಮಿಜಾರ್ ಅವರು ಚೋಟು ಎಂದೇ ಪ್ರಸಿದ್ದಿ. ಉಮೇಶ್ ಮಿಜಾರ್ ಪ್ರತಿಭಾವಂತ ಕಲಾವಿದ, ನಿರ್ದೇಶಕ, ಬರಹಗಾರ ಒಟ್ಟಿನಲ್ಲಿ ಬಹುಮುಖ ಪ್ರತಿಭೆ.‌ ನಾಟಕ ಇರಲಿ, ಸಿನಿಮಾ ಇರಲಿ, ಧಾರಾವಾಹಿ ಇರಲಿ ಅಲ್ಲಿ ಉಮೇಶ್ ಇದ್ದಾರೆ ಎಂದರೆ ಅಲ್ಲಿ ನಗುವಿಗೆ ಬರವೇ ಇಲ್ಲ. ತನ್ನದೇ ಆದ ಮ್ಯಾನರಿಸಂನ ಮೂಲಕ ಪ್ರೇಕ್ಷಕರನ್ನು ಸೆಳೆಯುವ, ಹಿಡಿದಿಡುವ ಚಾಕಚಾಕ್ಯತೆ ಈ ಕಲಾವಿದನಲ್ಲಿದೆ. ಸೌಮ್ಯ ಸ್ವಭಾವದ, ಯಾರಿಗೂ ನೋವುಂಟು ಮಾಡದ ಕಲಾವಿದ ಇಂದು ನಾಟಕರಂಗದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಟಕದಲ್ಲಿ ಸ್ತ್ರೀ ಪಾತ್ರ ಇರಲಿ, ನಾಯಕ ನಟನಾಗಿ ಇರಲಿ ಜನರನ್ನು ಮನರಂಜಿಸ ಬಲ್ಲರು. ಅವರು ಯಕ್ಷಗಾನ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಯಕ್ಷಗಾನದ ಮೇರು ಕಲಾವಿದ ಅರುವ ಕೊರಗಪ್ಪ ಶೆಟ್ಟರ ಶೈಲಿಯನ್ನು ಅನುಕರಿಸಿ ಡೈಲಾಗ್ ಹೊಡೆದರೆ ಅಲ್ಲಿ ಶಿಳ್ಳೆ ಚಪ್ಪಾಲೆಗಳು ಬೀಳುತ್ತದೆ.

ಪ್ರತೀವರ್ಷ ಉತ್ತಮ ನಾಟಕವನ್ನು ರಂಗಭೂಮಿಗೆ ಅರ್ಪಿಸುತ್ತಿದ್ದಾರೆ. ಅವರ ನಾಟಕಗಳಲ್ಲಿ ಸಮಾಜಕ್ಕೆ ಸಂದೇಶ ಇದೆ, ರಸದೌತಣವೂ ಇದೆ. ಕಳೆದ 26 ವರ್ಷಗಳಿಂದ ಮೂಡಬಿದ್ರೆಯಲ್ಲಿ ನಾಟಕ ತಂಡ ಕಟ್ಟಿ ಕಲಾಸೇವೆ ಮಾಡುತ್ತಿರುವ ಉಮೇಶ್ ಮಿಜಾರ್ “ನಮ್ಮ ಕಲಾವಿದರು ಬೆದ್ರ” ತಂಡದ ಮೂಲಕ ಹೊಸ ಕೃತಿ “ವೈರಲ್ ವೈಶಾಲಿ” ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಕತೆ, ಸಂಭಾಷಣೆ, ಗೀತಾ ಸಾಹಿತ್ಯವೂ ಅವರದ್ದೇ ಆಗಿದೆ. ಒಂದು ತಂಡವನ್ನು ಕಟ್ಟಿಕೊಂಡು ಪ್ರದರ್ಶನಕ್ಕೆ ಇಳಿದಿರುವ ಉಮೇಶ್ ಮಿಜಾರ್ ಅವರ ನಾಟಕಗಳಿಗೆ ಮುಂಬೈ, ಬೆಂಗಳೂರಿನಲ್ಲೂ ಬಹು ಬೇಡಿಕೆ ಇದೆ. ಈ ಬಾರಿಯ ನಾಟಕದಲ್ಲಿ ಯುವ ಜನತೆಗೊಂದು ಸಂದೇಶ ರವಾಣಿಸಿದ್ದಾರೆ.

ತನ್ನ ನಾಟಕದಲ್ಲಿ ನಗಿಸುವುದೇ ಒಂದು ಗುರಿಯಲ್ಲ. ನಗುವಿನ ಜೊತೆಗೆ ಉತ್ತಮ ಕತೆಯನ್ನು ನೀಡತ್ತಿದ್ದೇನೆ, ಎರಡೂವರೆ ಗಂಟೆಗಳ ಕಾಲ “ವೈರಲ್ ವೈಶಾಲಿ’ ನಾಟಕ ಪ್ರೇಕ್ಷಕ ವರ್ಗವನ್ನು ಮನರಂಜಿಸಲಿದೆ ಎಂದು ಉಮೇಶ್ ಮಿಜಾರ್ ತಿಳಿಸಿದ್ದಾರೆ.

ಕಲಾವಿದರಾಗಿ ಚಂದ್ರಹಾಸ ಪೂಜಾರಿ, ಹರೀಶ್ ಆಲದಪದವು, ಹರೀಶ್ ಕಡಂದಲೆ, ಉಮೇಶ್ ಮಿಜಾರ್, ಚಂದ್ರಹಾಸ ಶೆಟ್ಟಿ ಅಶ್ವಥಪುರ, ದಯೇಶ್ ಮುಲ್ಕಿ ಪುತ್ತೂರು, ಹರೀಶ್ಚಂದ್ರ ಪೆರಾಡಿ, ವಿನಾಯಕ ಜೆಪ್ಪು, ಶ್ರೀಜಿತ್ ರಾಜ್ ನಡಾರ, ಸುರೇಂದ್ರ ಸಾಣೂರು, ಅನೀಶ ಕುಡ್ಲ, ಸಂಗೀತಾ ಮುಲ್ಕಿ, ಚಂದ್ರಕಲಾ ಕುಡ್ಲ, ಹಾಗೂ ಸಂಗೀತದಲ್ಲಿ ಶ್ರೀನಾಥ ಮೂಡಬಿದ್ರೆ ಇದ್ದಾರೆ.

ಪ್ರದರ್ಶನಗಳು ಬೇಕಾದಲ್ಲಿ 9880833485 ಮೊಬೈಲ್ ನ್ನು ಸಂಪರ್ಕಿಸ ಬಹುದು.

error: Content is protected !!