ಮೊಂತಾ ಚಂಡಮಾರುತ ತನ್ನ ಮೊಂಡಾಟ ಮುಂದುವರಿಸಿದ್ದು, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೊಂದು ವಾರ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಳೆಯಿಂದಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಉಂಟಾಗಿದ್ದ ಮಾಲಿನ್ಯ ಪ್ರಮಾಣವೂ ಇಳಿಕೆಯಾಗಿದೆ. ಆದರೆ ಕಟಾವಿಗೆ ಬಂದಿರುವ ಭತ್ತದ ಪೈರುಗಳಿಗೆ ಈ ರಣ ಮಳೆ ಅಪಾಯಕಾರಿಯಾಗಿ ಪರಿಣಮಿಸಿದ್ದು, ಅತ್ತ ಕೊಯ್ಯುವ ಹಾಗೂ ಇಲ್ಲ, ಇತ್ತ ಉಳಿಸುವ ಹಾಗೂ ಇಲ್ಲ ಎನ್ನುವಂತಾಗಿದೆ.

ವಾಯುಭಾರ ಕುಸಿತ ಹಾಗೂ ಚಂಡಮಾರುತ ಪ್ರಸರಣದ ಪ್ರಭಾವದಿಂದಾಗಿ ದಕ್ಷಿಣ ಕರ್ನಾಟಕದ ವಿವಿಧ ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಕೇರಳದಲ್ಲಿ ನಿರಂತರ ಮಳೆ ಮುಂದುವರಿದಿದ್ದು ಬಲವಾದ ಗಾಳಿಯಿಂದಾಗಿ ಮರಗಳು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಲ್ಲದೇ ಕೇರಳದ 8 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡಿದ್ದು ಭಾರೀ ಮಳೆ ಮುಂದುವರಿದಿದೆ ಎಂದು ಐಎಂಡಿ ಉಲ್ಲೇಖಿಸಿದೆ.
ಕರ್ನಾಟಕ ಸೇರುದಂತೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ವಿದರ್ಭ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶ, ಛತ್ತೀಸ್‌ಗಢ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಾರ್ಖಂಡ್, ಒಡಿಶಾ ಮತ್ತು ಸಿಕ್ಕಿಂನಲ್ಲಿ ಅಕ್ಟೋಬರ್ 28 ಮತ್ತು 30ರ ನಡುವೆ ಮಿಂಚು – ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 29 ಮತ್ತು 30ಕ್ಕೆ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಮಣಿಪುರದಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ.

ದೇಶದ ವಿವಿಧ ಭಾಗದಲ್ಲಿ ಚಳಿಗಾಲ ವಾತಾವರಣ ಸೃಷ್ಟಿಯಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಚಳಿಗಾಲದ ಪರಿಣಾಮ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ವಾರದ ಆರಂಭದಲ್ಲಿ ಆಂಧ್ರಪ್ರದೇಶ ಕರಾವಳಿಯಲ್ಲಿ ‘ತೀವ್ರ’ ಚಂಡಮಾರುತ ಸೃಷ್ಟಿ ಆಗುವ ಸಾಧ್ಯತೆ ಇದೆ. ಮೊಂತಾ ಚಂಡಮಾರುತದ ಪ್ರಭಾವ ನೆರೆಯ ಆಂಧ್ರಪ್ರದೇಶದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಅಕ್ಟೋಬರ್ 28ಕ್ಕೆ ಕಾಕಿನಾಡ ಬಳಿಯ ಮಚಲಿಪಟ್ನಂ ಮತ್ತು ಕಳಿಂಗಪಟ್ನಂ ನಡುವೆ ಚಂಡಮಾರುತ ಆಂಧ್ರಪ್ರದೇಶವನ್ನು ದಾಟಲಿದೆ ಎಂದು ಐಎಂಡಿ ತಿಳಿಸಿದೆ. ಗಾಳಿಯ ವೇಗವು ಪ್ರತಿ ಗಂಟೆಗೆ 90 ರಿಂದ 100 ಕಿ.ಮೀ ತಲುಪುವ ನಿರೀಕ್ಷೆಯಿದೆ, ಗಂಟೆಗೆ 110 ಕಿ.ಮೀ. ವೇಗದಲ್ಲಿ ಮುಂದುವರಿಯಬಹುದು ಎನ್ನಲಾಗಿದೆ.
ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂನಲ್ಲಿ ಈಗಾಗಲೇ ಭಾರೀ ಮಳೆ ಮುಂದುವರಿದಿದ್ದು, ವಿವಿಧ ಭಾಗದಲ್ಲಿ ಮುಂದಿನ ಐದರಿಂದ ಆರು ದಿನಗಳವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ಟೋಬರ್ 27 ಮತ್ತು 28 ರಂದು ರಾಯಲಸೀಮಾದಲ್ಲಿ ಅತಿ ಹೆಚ್ಚು ಮಳೆ (24 ಗಂಟೆಗಳಲ್ಲಿ 210 ಮಿ.ಮೀ.ಗಿಂತ ಹೆಚ್ಚು) ಆಗುವ ನಿರೀಕ್ಷೆ ಇದೆ.

