ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಪುತ್ತೂರು ಗ್ರಾಮಾಂತರ ಪಿಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ.

ಪ್ರಚೋದನ ಕಾರಿ ಭಾಷಣ, ಮಹಿಳೆಯ ಘನತೆಗೆ ಧಕ್ಕೆಯುಂಟು ಮಾಡುವ ಭಾಷಣ ಮಾಡಿದ ಆರೋಪದಡಿ ಪ್ರಭಾಕರ ಭಟ್ ವಿರುದ್ಧ ದಾಖಲಾಗಿತ್ತು. ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
ಅ.20ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಿದ್ದರು. ಭಾಷಣದ ಬಳಿಕ ಈಶ್ವರಿ ಪದ್ಮುಂಜ ಎಂಬವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ದೂರು ನೀಡಿದ್ದರು. ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಭಾಕರ್ ಭಟ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು. BNS 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಆರ್‌ಎಸ್‌ಎಸ್ ಪಥಸಂಚನಲನಕ್ಕೆ ತಡೆಯೊಡ್ಡಿದ ಕುರಿತು ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್, ಯಾರು ಅಡ್ಡ ಬಂದರೂ ಪಥಸಂಚಲನ ಮಾಡೇ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಆರ್‌ಎಸ್ಎಸ್ ದೇಶದೆಲ್ಲೆಡೆ ಪಥಸಂಚಲನ ಮಾಡುತ್ತಿದೆ. ಶಾಂತಿಯುತವಾಗಿ ಎಲ್ಲಾ ಕಡೆ ಪಥಸಂಚಲನ ನಡೆಯುತ್ತಿದೆ. ಇದನ್ನು ತಡೆಯಲು ಸಾಧ್ಯವಿಲ್ಲ, ತಡೆದರೂ ನಾವು ಮಾಡೇ ಮಾಡುತ್ತೇವೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಖರ್ಗೆ, ಕಲ್ಲಡ್ಕ ಪ್ರಭಾಕರ್ ಭಟ್ ಆಗಲಿ, ಅವರ ಅಪ್ಪ ಆಗಲಿ ಕಾನೂನು ಎಲ್ಲರಿಗೂ ಒಂದೆ. ಕೋರ್ಟ್ ಅನುಮತಿ ಕೊಡದೆ ಹೇಗೆ ಮಾಡುತ್ತಾರೆ. ಮಾಡಿದರೆ ಸರ್ಕಾರ ನೋಡುತ್ತಾ ಕುಳಿತಿರುತ್ತಾ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದರು.

