ಬೆಂಗಳೂರು: ಪ್ರೀತಿಸುವಂತೆ ಎರಡು ಮಕ್ಕಳ ತಾಯಿಗೆ ಕಿರುಕುಳ, ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡು ಮೂಲದ ಸಂತೋಷ್ ರೆಡ್ಡಿ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆ(42) ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಆಗಿದ್ದು, ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸವಾಗಿದ್ದಾರೆ. ತನ್ನ ಸಂಬಂಧಿಯೊಬ್ಬರ ಮದುವೆ ಬಟ್ಟೆ ಡಿಸೈನ್ ಮಾಡುವಂತೆ ಸಂತ್ರಸ್ತೆಯನ್ನು ಸಂತೋಷ್ ರೆಡ್ಡಿ ಸಂಪರ್ಕಿಸಿದ್ದ. ಸಂಪರ್ಕ ಸ್ನೇಹಕ್ಕೆ ತಿರುಗಿ ಕುಟುಂಬದ ಸ್ನೇಹಿತರಾಗಿದ್ದರು.

ಕೆಲ ತಿಂಗಳ ಬಳಿಕ ಸಂತೋಷ್ ರೆಡ್ಡಿ, ನಿಮ್ಮ ಬ್ಯುಸಿನೆಸ್‌ಗೆ ಹೂಡಿಕೆ ಮಾಡಿವುದಾಗಿ ಸಂತ್ರಸ್ತೆಗೆ ಹೇಳಿದ್ದಾನೆ. ಈ ಮಧ್ಯೆ ಸಂತ್ರಸ್ತೆ ಮನೆಗೆ ಬಂದಿದ್ದ ಸಂತೋಷ್ ರೆಡ್ಡಿ, ಏಕಾಏಕಿ ನನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಸಂತ್ರಸ್ತೆ ನಿರಾಕರಿಸಿದ್ದಾರೆ.

ಅದರಿಂದ ಸಂತೋಷ್ ಮೇಲೆ ಹಲ್ಲೆ ಮಾಡಿದ್ದು, ಪ್ರೀತಿಸದಿದ್ದರೆ ನಿನ್ನ ಇಬ್ಬರು ಮಕ್ಕಳು, ನಿನ್ನನ್ನೂ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.