
ಸುರತ್ಕಲ್: ದೀಪಾವಳಿ ಪ್ರಯುಕ್ತ ಹಮ್ಮಿಕೊಳ್ಳಲಾದ “ಪಟಾಕಿ ಉತ್ಸವ” ಇದರ ಬಹುಮಾನ ವಿತರಣಾ ಸಮಾರಂಭ ಶನಿವಾರ ಸಂಜೆ ಶುಭಗಿರಿ ಬಳಿಯ ಅಗರಿಯಲ್ಲಿ ಜರುಗಿತು.
ಈ ವೇಳೆ ಮಾತಾಡಿದ ಅಗರಿ ಎಂಟರ್ಪ್ರೈಸಸ್ ಮಾಲಕ ಅಗರಿ ರಾಘವೇಂದ್ರ ರಾವ್ ಅವರು, “ಪಟಾಕಿ ಉತ್ಸವವನ್ನು ಕಳೆದ ಹಲವು ವರ್ಷಗಳಿಂದ ಪ್ರಕಾಶ್ ಅವರು ಆಯೋಜಿಸಿಕೊಂಡು ಬರುತ್ತಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ಜನರಿಗೆ ಪಟಾಕಿಯನ್ನು ಕೊಡುವ ಮೂಲಕ ಅವರು ಹಬ್ಬದ ಸಡಗರ ಹೆಚ್ಚಿಸಲು ಕಾರಣರಾಗಿದ್ದಾರೆ. ಪಟಾಕಿ ಹಬ್ಬದಲ್ಲಿ 50 ಜನರಿಗೆ ಬಹುಮಾನ ಕೊಡಲೇಬೇಕು ಎಂದು ನಿರ್ಧರಿಸಿದ್ದಾರೆ. ಇಷ್ಟೇ ಅಲ್ಲದೆ ಸ್ಥಳದಲ್ಲೇ ಕುಳಾಯಿ ನಿವಾಸಿ ಬಾಲಕಿಯ ಚಿಕಿತ್ಸೆಗೆ 30,000 ರೂಪಾಯಿ ಕೊಟ್ಟು ನೆರವಾಗಿದ್ದಾರೆ. ಇದು ಅವರ ದೊಡ್ಡಗುಣ. ವಿಜೇತರಿಗೆ ಬಹುಮಾನ ವಿತರಿಸಲು ಸರಳವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿಯ ವಿಚಾರ” ಎಂದರು.
ಬಳಿಕ ಮಾತಾಡಿದ ಪಟಾಕಿ ವ್ಯಾಪಾರಿ ಪ್ರಕಾಶ್ ಅವರು, “ಪಟಾಕಿ ವ್ಯಾಪಾರ ನೋಡುವಷ್ಟು ಸುಲಭವಲ್ಲ. ಎಲ್ಲ ಡಿಪಾರ್ಟ್ಮೆಂಟ್ ನವರದ್ದು ಕೂಡ ಉಪಟಳ ಇದ್ದೇ ಇರುತ್ತದೆ. ಪಟಾಕಿ ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ಅಲ್ಲಲ್ಲಿ ನಿರ್ಬಂಧ ಹೇರುವುದು, ಓಡಿಸುವುದು ಸರಿಯಲ್ಲ. ಜಿಲ್ಲಾಡಳಿತಕ್ಕೆ ಹತ್ತಾರು ಬಾರಿ ಮನವಿಯನ್ನು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಪಟಾಕಿ ವ್ಯಾಪಾರವನ್ನು ಎಲ್ಲ ವ್ಯಾಪಾರದಂತೆ ನಿರ್ಭೀತವಾಗಿ ನಡೆಸಲು ಜಿಲ್ಲಾಡಳಿತ ನೆರವಾಗಬೇಕು. ಈ ಬಾರಿ ಸುರತ್ಕಲ್ ಚರ್ಚ್ ಆಡಳಿತ ಕಮಿಟಿ ದೊಡ್ಡ ಮನಸು ಮಾಡಿ ಮೈದಾನ ಕೊಡದೆ ಇದ್ದರೆ ನಾವು ಬೀದಿಗೆ ಬೀಳಬೇಕಾಗಿತ್ತು. ನಮ್ಮಲ್ಲಿಗೆ ಬೇರೆ ಬೇರೆ ಊರುಗಳಿಂದ ಪಟಾಕಿ ಕೊಳ್ಳಲು ಆಗಮಿಸುತ್ತಾರೆ. ನ.1-2ರಂದು ಮತ್ತೆ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಪಟಾಕಿ ಮಾರಾಟ ನಡೆಯಲಿದೆ“ ಎಂದರು.
ಬಳಿಕ ಬಹುಮಾನ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕೇಶವ ರಾವ್, ರತನ್ ಕುಮಾರ್ ಹೆಚ್ ಪಿಸಿ ಎಲ್, ಅಲ್ವಿನ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.