ಸರ್ಪಗಳ ಪ್ರೇಮ ಮಿಲನ ಕಾಲ ಆರಂಭ: ಡಿಸೆಂಬರ್‌ ತನಕ ಎಚ್ಚರಿಕೆ ವಹಿಸಲು ಸೂಚನೆ

ತಿರುವನಂತಪುರಂ: ಕೇರಳದಲ್ಲಿ ಹಾವುಗಳ ಮಿಲನ ಕಾಲ ಆರಂಭವಾಗುತ್ತಿದ್ದಂತೆ ಹಾವು ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಡಿಸೆಂಬರ್‌ವರೆಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಸಾಮಾನ್ಯವಾಗಿ ದಕ್ಷಿಣ ಕನ್ನಡದಲ್ಲೂ ಅಕ್ಟೋಬರ್‌ನಿಂದ ಡಿಎಂಬರ್‌ ತನಕ ಹಾವುಗಳ ಮಿಲನ ಕಾಲವಾಗಿದ್ದು, ಹಾಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವನ್ಯಜೀವಿಗಳ ಅಧ್ಯಯನಕಾರರು ಎಚ್ಚರಿಕೆ ನೀಡಿದ್ದಾರೆ.

ಅಧಿಕೃತ ಅಂಕಿ–ಅಂಶಗಳ ಪ್ರಕಾರ ಸೆಪ್ಟೆಂಬರ್‌ರಿಂದ ಅಕ್ಟೋಬರ್‌ವರೆಗೆ ಕೇರಳ ರಾಜ್ಯದಾದ್ಯಂತ 4,000 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಲಾಗಿದೆ. ಸಾಮಾನ್ಯವಾಗಿ ತಿಂಗಳಿಗೆ 1,500 ಕ್ಕಿಂತ ಕಡಿಮೆ ಹಾವುಗಳ ರಕ್ಷಣೆಯಾಗುತ್ತಿದ್ದರೆ, ಈ ಬಾರಿ ಅಂಕೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹೋಲಿಸಿದರೆ 36 ಶೇಕಡಾ ಹೆಚ್ಚಳ ದಾಖಲಾಗಿದೆ.

ತಜ್ಞರ ಪ್ರಕಾರ, ಸಂಭೋಗಕಾಲದಲ್ಲಿ ಹೆಣ್ಣು ಹಾವು ಹೊರಸೂಸುವ ಫೆರೋಮೋನ್ ವಾಸನೆಯ ಹಾದಿಯನ್ನು ಹಿಡಿದು ಹಲವಾರು ಗಂಡು ಹಾವುಗಳು ಒಂದೇ ಸ್ಥಳದಲ್ಲಿ ಸೇರುತ್ತವೆ. ಈ ಸ್ಪರ್ಧಾತ್ಮಕ ವಾತಾವರಣವು ಹಾವುಗಳ ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳು ಮಾನವ ವಾಸಸ್ಥಾನಗಳತ್ತ ನುಗ್ಗುವ ಸಾಧ್ಯತೆ ಹೆಚ್ಚಾಗುತ್ತದೆ.

“ಈ ಅವಧಿಯಲ್ಲಿ ಹಾವುಗಳು ಸಾಮಾನ್ಯವಾಗಿ ಹಗಲಲ್ಲಿಯೂ ಕಾಣಿಸಬಹುದು. ಜನರು ಎಚ್ಚರಿಕೆಯಿಂದ ಇರಬೇಕು,” ಎಂದು ರಾಜ್ಯ ಹಾವು ರಕ್ಷಣಾ ನೊಡಲ್ ಅಧಿಕಾರಿ ಹಾಗೂ ಅರಣ್ಯ ಸಹ ಸಂರಕ್ಷಕ ಮೊಹಮ್ಮದ್ ಅನ್ವರ್ ವೈ. ತಿಳಿಸಿದ್ದಾರೆ.

ಪ್ರಾಣಿ ವೈದ್ಯಾಧಿಕಾರಿ ಡಾ. ಜೇಕಬ್ ಅಲೆಕ್ಸಾಂಡರ್ ಅವರು, “ಸಂಭೋಗಕಾಲದಲ್ಲಿ ಗಂಡು ಹಾವುಗಳಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣ ಹೆಚ್ಚಾಗುತ್ತದೆ. ಹಾವುಗಳು ಒತ್ತಡದಿಂದ ಹೆಚ್ಚಾಗಿ ಆಕ್ರಮಣಶೀಲವಾಗುತ್ತವೆ. ಅದರಿಂದ ಹಾವುಗಳು ಹೆಚ್ಚು ದೂರ ಪ್ರಯಾಣಿಸುತ್ತವೆ, ಮತ್ತು ಮಾನವರ ಸಂಪರ್ಕ ಹೆಚ್ಚಾಗುತ್ತದೆ,” ಎಂದು ಹೇಳಿದ್ದಾರೆ.

ಹಾವು ರಕ್ಷಕ ಮೊಹಮ್ಮದ್ ಶೆಬಿನ್ ಅವರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮನೆಗಳ ಅಡುಗೆಮನೆ, ಬಾವಿ ಹಾಗೂ ಮಳಿಗೆಗಳಲ್ಲಿಯೂ ಹಾವುಗಳು ಕಾಣಿಸಿಕೊಳ್ಳುತ್ತಿವೆ. “ಒಂದು ಹಾವನ್ನು ರಕ್ಷಿಸಿದ ನಂತರವೂ ಅಲ್ಲಿ ಇತರ ಹಾವುಗಳು ಇರಬಹುದು. ಫೆರೋಮೋನ್ ಹಾದಿಯ ಕಾರಣದಿಂದಾಗಿ ಒಂದೇ ಪ್ರದೇಶದಲ್ಲಿ ಹಲವು ಹಾವುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ,” ಎಂದರು.

ಅರಣ್ಯ ಇಲಾಖೆ ಜನರಿಗೆ ಮನವಿ ಮಾಡಿದ್ದು – ಹಾವನ್ನು ಕಂಡರೆ ಸ್ವಯಂ ಹಿಡಿಯಲು ಯತ್ನಿಸದೇ, ತಕ್ಷಣ ಸ್ಥಳೀಯ ಸರ್ಪ ರಕ್ಷಣಾ (SARPA) ಸೇವೆಗೆ ಅಥವಾ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!