ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಕುರಿತು ವಿಚಾರಣೆಗಾಗಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ನಾಲ್ವರಿಗೆ ಎಸ್‌ಐಟಿ ನೋಟಿಸ್ ನೀಡಿದೆ.

ಸೋಮವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ನೋಟಿಸ್ ನೀಡಲಾಗಿದೆ. ಬಿಎನ್ ಎಸ್ಎಸ್ 35(3) ಅಡಿಯಲ್ಲಿ ನೀಡಲಾದ ನೋಟಿಸ್‌ನಲ್ಲಿ, ಪ್ರಕರಣದ ಸಂದರ್ಭಗಳು ಮತ್ತು ಸಂಬಂಧಿತ ಸಂಗತಿಗಳನ್ನು ಖಚಿತಪಡಿಸಲು ಈ ನಾಲ್ವರ ಹಾಜರಾತಿ ಅಗತ್ಯವಿದ್ದುದಾಗಿ ವಿವರಿಸಲಾಗಿದೆ. ತನಿಖಾಧಿಕಾರಿಯು ನೋಟಿಸ್‌ನಲ್ಲಿ ಪ್ರಕರಣದ ಮಹತ್ವಪೂರ್ಣ ಅಂಶಗಳನ್ನು ಉಲ್ಲೇಖಿಸಿ, ಮಾಹಿತಿಯನ್ನು ದೃಢಪಡಿಸಲು ಅವರ ಸಹಕಾರವನ್ನು ಕೇಳಿದ್ದಾರೆ.
ಎಸ್ಐಟಿ ನೋಟಿಸ್ನಲ್ಲೇನಿದೆ?
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ವರಿಗೆ ಎಸ್ಐಟಿ ನೀಡಿರುವ ನೋಟಿಸ್‌ನಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಕಲಂ 35(3) ಅಡಿಯಲ್ಲಿ , ದಿನಾಂಕ 04/07/2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಕುರಿತಂತೆ ಸಂದರ್ಶನಕ್ಕಾಗಿ 27/10/2025 ರಂದು ಬೆಳಿಗ್ಗೆ 10.30ಕ್ಕೆ ಎಸ್‌ಐಟಿ ಕಚೇರಿಗೆ ಹಾಜರಾಗಲು ಸೂಚಿಸಲಾಗಿದೆ.
ನೋಟಿಸ್‌ನಲ್ಲಿ, ಆರೋಪಿಗಳಿಗೆ ಇವು ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಯಾವುದೇ ಅಪರಾಧ ನಡೆಸಬಾರದು, ಸಾಕ್ಷ್ಯಗಳಿಗೆ ಪ್ರಭಾವ ಬೀರಬಾರದು, ನ್ಯಾಯಾಲಯದ ಮುಂದೆ ಅಥವಾ ತನಿಖಾಧಿಕಾರಿಗಳ ಮುಂದೆ ಸಂಗತಿಗಳನ್ನು ಸತ್ಯಹೀನವಾಗಿ ಹೇಳಬಾರದು, ನ್ಯಾಯಾಲಯ/ತದನಂತರ ತನಿಖೆಯಲ್ಲಿ ಹಾಜರಾಗುವುದು, ಸಹಕಾರ ನೀಡುವುದು, ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಹಾಜರುಪಡಿಸುವುದು, ಆರೋಪಿಗಳ ಗುರುತಿಸುವಿಕೆ ಮತ್ತು ಬಂಧನದಲ್ಲಿ ಸಹಕಾರ ನೀಡುವುದು, ಮತ್ತು ಸಾಕ್ಷ್ಯಗಳನ್ನು ನಾಶಮಾಡದಂತೆ ಮಾಡುವುದು. ನೋಟಿಸ್ ಪಾಲನೆ ಮಾಡದಿದ್ದರೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಕಲಂ 35(6) ಅಡಿಯಲ್ಲಿ ದಸ್ತಗಿರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಉಲ್ಲೇಖಿಸಲಾಗಿದೆ.

