ಕಾಸರಗೋಡು: ತಾನು ಪ್ರೀತಿಸಿದ ವ್ಯಕ್ತಿಯು ಮುಸ್ಲಿಂ ಆಗಿರುವ ಕಾರಣಕ್ಕೆ ತಂದೆಯೇ ಕಳೆದ ಐದು ತಿಂಗಳಿಂದ ಮನೆಬಂಧನದಲ್ಲಿಟ್ಟಿದ್ದಾರೆ ಎಂದು 35 ವರ್ಷದ ವಿಕಲಚೇತನ ಮಹಿಳೆ ಸಂಗೀತಾ ಪಿ.ವಿ. ಎಂಬಾಕೆ ಗಂಭೀರ ಆರೋಪ ಮಾಡಿದ್ದಾರೆ. ಸಂಗೀತಾ ಉಡಮಾ ಪಂಚಾಯತ್‌ನ ಸಿಪಿಎಂ ನಾಯಕ ಪಿ.ವಿ. ಭಾಸ್ಕರನ್ ಅವರ ಪುತ್ರಿ. ವಿಚ್ಛೇದಿತೆಯಾಗಿರುವ ಸಂಗೀತಾ 13 ವರ್ಷದ ಮಗನ ತಾಯಿ. ಬೈಕ್ ಅಪಘಾತದಿಂದ ಪಾರ್ಶ್ವವಾಯುಕ್ಕೀಡಾಗಿದ್ದ ಸಂಗೀತಾಗೆ ಚಿಕಿತ್ಸೆ ನೀಡಿದ ವೈದ್ಯ ರಶೀದ್ ವಿ. (36) ಜೊತೆ ಪ್ರೀತಿ ಮೂಡಿತ್ತು.

ಆದರೆ ಈ ಸಂಬಂಧವನ್ನು ತಂದೆ ವಿರೋಧಿಸಿ ಇದೀಗ ಮಗಳನ್ನು ಗೃಬಂಧನದಲ್ಲಿಟ್ಟಿದ್ದಾರೆ. ಗೃಹಬಂಧನದಲ್ಲಿರುವ ಆಕೆ ʻಇವು ನನ್ನ ಕೊನೆಯ ಸಂದೇಶವಾಗಬಹುದು. ದಯವಿಟ್ಟು ನನ್ನನ್ನು ರಕ್ಷಿಸಿರಿ” ಎಂದು ಮನವಿ ಮಾಡಿದ್ದಾರೆ.
ಈ ಪ್ರಕರಣವು ಕಳೆದ ಆಗಸ್ಟ್‌ನಲ್ಲಿ ಕೇರಳ ಹೈಕೋರ್ಟ್ ತನಕ ತಲುಪಿತ್ತು. ಆನ್‌ಲೈನ್ ವಿಚಾರಣೆಯಲ್ಲಿ ಸಂಗೀತಾ “ನಾನು ಗೃಹಬಂಧನದಲ್ಲಿದ್ದೇನೆ” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರೂ, ನ್ಯಾಯಾಲಯವು ಅರ್ಜಿದಾರನ ಉದ್ದೇಶವನ್ನು ಗಮನಿಸಿ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಿತ್ತು. ಯಾಕೆಂದರೆ ತಂದೆ ಭಾಸ್ಕರನ್ “ಅವಳ ರಕ್ಷಣೆಗೆಂದೇ ಮನೆಯಲ್ಲಿ ಇರಿಸಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ. “ಅವಳಿಂದ ಎರಡು ಫೋನ್‌ಗಳನ್ನು ತೆಗೆದುಕೊಂಡಿದ್ದೇನೆ, ಆದರೆ ಅವಳು ಮತ್ತೊಂದು ಫೋನ್ ಬಳಸಿ ವಿಡಿಯೊ ಕಳುಹಿಸುತ್ತಿದ್ದಾಳೆ,” ಎಂದು ಅವರು ಹೇಳಿದರು.
ಇದೇ ವೇಳೆ ವೈದ್ಯ ರಶೀದ್ “ನಾನು ಅವಳ ಧರ್ಮ ಬದಲಾಯಿಸಲು ಯತ್ನಿಸುತ್ತಿಲ್ಲ. ಅವಳು ತನ್ನ ಧರ್ಮದಲ್ಲೇ ಇರಲಿ, ನಾನು ನನ್ನ ಧರ್ಮದಲ್ಲೇ ಇರುತ್ತೇನೆ” ಎಂದರೆ, ಅವನ ಅಸಲಿ ಪತ್ನಿ ಗುಲ್ನಾರ್ “ಅವರು ನನ್ನ ಆಭರಣಗಳನ್ನು ಮಾರಿದ್ದಾರೆ, ಸಾಲ ಮಾಡಿದ್ದಾರೆ, ಈಗ ನನ್ನನ್ನೂ ಮಕ್ಕಳನ್ನೂ ಬಿಟ್ಟುಹೋದರು” ಎಂದು ಆರೋಪಿಸಿದ್ದಾರೆ.
ರಾಜಕೀಯ ವಲಯದಲ್ಲೂ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಮುಖಂಡ ಅಡ್ವೊ. ಶಜೀದ್ ಕಮ್ಮಡಂ ಪ್ರಕಾರ “ಸಂಗೀತಾ ವಯಸ್ಕ ಮಹಿಳೆಯಾಗಿರುವುದರಿಂದ ನ್ಯಾಯಾಲಯವು ಆಕೆಯ ಸ್ವಾತಂತ್ರ್ಯವನ್ನು ಕಾಪಾಡಬೇಕಾಗಿತ್ತು.” ಎಂದಿದ್ದಾರೆ. ಬಿಜೆಪಿ ಉತ್ತರ ವಲಯಾಧ್ಯಕ್ಷ ಅಡ್ವೊ. ಕೆ. ಶ್ರೀಕಾಂತ್ ಪ್ರತಿಕ್ರಿಯಿಸಿ, “ತಂದೆಯ ಕ್ರಮ ಮಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಮಂಜಸವಾಗಿದೆ” ಎಂದಿದ್ದಾರೆ. ಸಿಪಿಎಂ ನಾಯಕ ಸಿ. ಶುಕ್ಕೂರ್ “ರಶೀದ್ ತನ್ನ ಮೊದಲ ಪತ್ನಿ ಮತ್ತು ಮಕ್ಕಳನ್ನು ಬಿಟ್ಟುಹೋದವನು. ಯಾವ ತಂದೆಯೂ ಇಂತಹ ವ್ಯಕ್ತಿಗೆ ಮಗಳನ್ನು ನೀಡುವುದಿಲ್ಲ” ಎಂದು ಹೇಳಿದರು.
ಸಂಗೀತಾ ಈಗಲೂ ತನ್ನ ವಿಡಿಯೊಗಳ ಮೂಲಕ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದು, ಈ ಪ್ರಕರಣಕ್ಕೆ ಕೇರಳ ಮಹಿಳಾ ಆಯೋಗದ ಗಮನ ಸೆಳೆಯುವ ಸಾಧ್ಯತೆ ಇದೆ.
ಭಾಸ್ಕರನ್ ಆರೋಪವೇನು?

ಕಾಸರಗೋಡಿನ ಉದುಮದಲ್ಲಿ ಸಿಪಿಎಂ ನಾಯಕರಾಗಿರುವ ಪಿ.ವಿ ಭಾಸ್ಕರನ್, ಮುಸ್ಲಿಂ ವಿವಾಹಿತನೊಬ್ಬ ತನ್ನ ಮಗಳ ತಲೆಕೆಡಿಸಿ, ಆಕೆಯನ್ನು ತನ್ನ ವಿರುದ್ಧವೇ ಎತ್ತಿ ಕಟ್ಟಿದ್ದಾನೆ ಎಂದು ಆರೋಪಿಸಿ ಕಣ್ಣೀರು ಇಡುತ್ತಿದ್ದಾರೆ. ಸೊಂಟದ ಕೆಳಭಾಗದಿಂದ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ತಮ್ಮ ವಿಚ್ಛೇದಿತ ಪುತ್ರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬಂದ ನಕಲಿ ವೈದ್ಯ ರಶೀದ್ ಆಕೆಯ ತಲೆ ಕೆಡಿಸಿದ್ದು, ಆಕೆ ಈಗ ತಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಸಿಪಿಎಂ ನಾಯಕ ಪಿ.ವಿ ಭಾಸ್ಕರನ್ ಅಳಲು ತೋಡಿಕೊಂಡಿದ್ದಾರೆ.
ಸಂಗೀತಾ ರಸ್ತೆ ಅಪಘಾತದಲ್ಲಿ ಸೊಂಟದ ಕೆಳಗಿನ ಭಾಗವನ್ನು ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾಳೆ. ಅವಳ ಚಿಕಿತ್ಸೆಗಾಗಿ 50 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದೇನೆ. ಆಗ ಬಂದ ರಶೀದ್ ನಕಲಿ ವೈದ್ಯ ಎನ್ನುವುದು ಆರಂಭದಲ್ಲಿ ತಮಗೆ ತಿಳಿದಿರಲಿಲ್ಲ. ಆತನಿಗೆ ಪತ್ನಿ, ಮಕ್ಕಳು ಇದ್ದರೂ ಸಂಪೂರ್ಣವಾಗಿ ನಿತ್ರಾಣವಾಗಿರುವ ಸಂಗೀತಳನ್ನು ಇಷ್ಟಪಟ್ಟಿದ್ದು ಏಕೆ ಎನ್ನುವ ಯೋಚನೆಯೂ ಅವಳಲಿಲ್ಲ. ಅವನಿಗೆ ಬೇಕಿರುವುದು ನನ್ನ ಮಗಳ ಇನ್ಶುರೆನ್ಸ್ ಹಣ. ಆದರೆ ಅವಳಿಗೆ ಏನೂ ಅರ್ಥವಾಗುತ್ತಿಲ್ಲ ಎಂದು ಭಾಸ್ಕರನ್ ಆರೋಪಿಸಿದ್ದಾರೆ.


ಈ ಮಧ್ಯೆ ಸಂಗೀತಾ ಸೂಪರೆಂಟೆಂಡೆಂಟ್ ಆಫ್ ಪೊಲೀಸ್ಗೆ ಪತ್ರ ಬರೆದು ತಂದೆಯ ವಿರುದ್ಧ ನಾನು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದಾರೆ. ವಿಚ್ಛೇದನದ ನಂತರ ನನ್ನ ತಂದೆ ಮತ್ತು ಸಹೋದರ ಜೀವನಾಂಶದ ಹಣವನ್ನು ತೆಗೆದುಕೊಂಡಿದ್ದಾರೆ, ಈಗ ನಾನು ರಶೀದ್ ಜೊತೆಗೆ ಹೋದರೆ ಸಾಯಿಸುವುದಾಗಿ ಹೇಳಿದ್ದಾರೆ ಎಂದು ಸಂಗೀತಾ ಅದರಲ್ಲಿ ಆರೋಪಿಸಿದ್ದಾರೆ.
ಇದು ಯಾವಾಗ ವೈರಲ್ ಆಯಿತೋ ಪತ್ರಿಕಾಗೋಷ್ಠಿ ಕರೆದ ಭಾಸ್ಕರನ್ ಅವರು, ನನಗೆ ಧರ್ಮದ ವಿಷಯದಲ್ಲಿ ಯಾವುದೇ ಭೇದಭಾವವಿಲ್ಲ. ನನ್ನ ಮಗಳ ಹೇಳಿಕೆಗಳು ನಿಜವಲ್ಲ. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೇ ಆಕೆಯ ಮದುವೆಯನ್ನು ಬೆಂಬಲಿಸುತ್ತಿದ್ದೆ. . ನನ್ನ ಮಗಳನ್ನು ತನ್ನ ಸ್ವಂತ ಕುಟುಂಬ ಅಥವಾ ಸಮುದಾಯದಿಂದ ಗೌರವಿಸಲ್ಪಡದ ವ್ಯಕ್ತಿಯ ಜೊತೆ ಹೇಗೆ ಕಳುಹಿಸಲು ಸಾಧ್ಯ? ನಾನು ಸ್ಥಳೀಯ ಜಮಾತ್ ನಾಯಕರೊಂದಿಗೆ ಅವರ ಸ್ಥಳಕ್ಕೆ ಭೇಟಿ ನೀಡಿ ಸತ್ಯಗಳನ್ನು ದೃಢಪಡಿಸಿದೆ. ಅವಳಿಗೆ 1.5 ಕೋಟಿ ರೂ. ಪರಿಹಾರ ಸಿಕ್ಕಿದೆ. ಆ ಹಣಕ್ಕಾಗಿಯೇ ಅವನು ಸ್ನೇಹಿತನ ಮೂಲಕ ನ್ಯಾಯಾಲಯವನ್ನು ಸಂಪರ್ಕಿಸಿ, ನನ್ನ ಮಗಳನ್ನು ಕೂಡಿ ಹಾಕಿರುವುದಾಗಿ ದೂರಿ ಅರ್ಜಿ ಸಲ್ಲಿಸಿದ್ದಾನೆ ಎಂದು ಆರೋಪಿಸಿದ್ದಾರೆ.