ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಒಬ್ಬ ಮತ್ತೊಬ್ಬನೊಂದಿಗೆ ಸೇರಿ ಪಟಾಕಿ ಅಂಗಡಿ ಮಾಲೀಕರನ್ನು ಬೆದರಿಸಿ ಸುಲಿಗೆ ಮಾಡಲು ಯತ್ನಿಸಿದ ಕುರಿತಂತೆ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಅಕ್ಟೋಬರ್ 22ರಂದು ಫಾಝಿಲ್ ಹತ್ಯೆ ಪ್ರಕರಣದ ಆರೋಪಿ, ರೌಡಿ ಶೀಟರ್ ಪಚ್ಚು ಎಂದೇ ಪರಿಚಿತ ಪ್ರಶಾಂತ್ ಮತ್ತು ಮತ್ತೋರ್ವ ಆರೋಪಿ ಅಶ್ವಿತ್ ಎಂಬವರು ಬಜ್ಪೆಯ ಪಟಾಕಿ ಅಂಗಡಿ ಮಾಲೀಕ ದಾಮೋದರ್ಗೆ ಬೆದರಿಸಿ ಅವರಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದಾರೆ.
ಆರೋಪಿಗಳಿಗೆ ಹೆದರಿ ದಾಮೋದರ್ ಅವರು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು. ಆದರೆ ಪೊಲೀಸರು ಧೈರ್ಯ ತುಂಬಿದ ಬಳಿಕ ದೂರು ನೀಡಿದ್ದು ನಿನ್ನೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪೊಲೀಸರು ಆರೋಪಿಗಳ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದು, ಇಬ್ಬರೂ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಬಜ್ಪೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

