ಮಂಗಳೂರು: ಪ್ರಲ್ಹಾದ್ ಜೋಶಿ, ತೇಜಸ್ವಿ ಸೂರ್ಯ, ವಿಜಯೇಂದ್ರ, ಆರ್ ಅಶೋಕ್ ಅವರು ಸಮೀಕ್ಷೆಯನ್ನು ತಿರಸ್ಕರಿಸುವಂತೆ ಕರೆ ನೀಡಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿಕೊಂಡು ಇದೀಗ ಈ ರೀತಿ ಹೇಳುವುದು ಸರಿಯಾ? ನಾಳೆ ನರೇಂದ್ರ ಮೋದಿ ನೇತೃತ್ವದಲ್ಲಿಯೂ ಸಮೀಕ್ಷೆ ನಡೆದಾಗ ಇದೇ ರೀತಿ ಹೇಳ್ತಾರಾ? ಮೊದಲು ಇವರ ಮೇಲೆ ಸುಪ್ರೀಂ ಕೋರ್ಟ್ ಸುಮೊಟೋ ಕೇಸ್ ಹಾಕ್ಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅಲ್ಲದೆ ರಜಾದಿನಗಳಲ್ಲಿಯೇ ಸಮೀಕ್ಷೆ ನಡೆಸಿರುವ ಕಾರಣವನ್ನೂ ಅವರು ವಿವರಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸಮೀಕ್ಷೆಗೆ ವಿರೋಧ ಮಾಡುವುದನ್ನು ಬಿಟ್ಟು ಬಿಜೆಪಿಗರು ಸಹಕರಿಸಬೇಕಿದೆ. ರಾಜ್ಯದಲ್ಲಿ ಶೇ.71ರಷ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದರು.
ಜಾತಿ, ಆರ್ಥಿಕತೆ ಶಿಕ್ಷಣದ ಮಾಹಿತಿಗಾಗಿ ಸಮೀಕ್ಷೆಯ ಅಗತ್ಯತೆಯ ಬಗ್ಗೆ ಮನಗಂಡ ಅಂದಿನ ಜವಹರ್‌ಲಾಲ್ ನೆಹರೂ ಸರ್ಕಾರ ಸಮೀಕ್ಷೆ ಆರಂಭಿಸಿತು. 1951ರ ತಿದ್ದುಪಡಿ ಮೂಲಕ ರಾಜ್ಯಗಳಿಗೆ ಸಮೀಕ್ಷೆಯ ಜವಾಬ್ದಾರಿ ನೀಡಿದೆ. ಸುಪ್ರೀಂ ಕೋರ್ಟ್ ಕೂಡಾ 10 ವರ್ಷಗಳಿಗೊಮ್ಮೆ ಸಮೀಕ್ಷೆ ನಡೆಸುವಂತೆ ಸೂಚಿಸಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದುವರೆಗೂ ಸಮೀಕ್ಷೆ ನಡೆಸಿಲ್ಲ. ಕಳೆದ ಬಾರಿ ಕೊರೊನಾ ಅಂತ ಮಾಡಿಲ್ಲ. ಆದರೆ ಕೊರೊನಾ ಬಂದು ಅಷ್ಟು ವರ್ಷಗಳಾದರೂ ಯಾಕೆ ಸಮೀಕ್ಷೆ ನಡೆಸಿಲ್ಲ. ಇದೀಗ ನಾವು(ರಾಜ್ಯ) ಸಮೀಕ್ಷೆ ನಡೆಸಲು ಮುಂದಾಗುತ್ತಿದ್ದಂತೆ ಮೋದಿ ಸರ್ಕಾರವೂ ಸಮೀಕ್ಷೆಗೆ ಮುಂದಾಗಿದೆ. ನಮ್ಮ ಸಮೀಕ್ಷೆಯನ್ನು ವಿರೋಧಿಸಿರುವ ಬಿಜೆಪಿಗರು ನಾಳೆ ಮೋದಿ ಸಮೀಕ್ಷೆಯನ್ನೂ ತಿರಸ್ಕರಿಸಲಿ ಎಂದು ಸವಾಲು ಹಾಕಿದರು.
ಆರಂಭದಲ್ಲಿ ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಮಂದಗತಿಯಲ್ಲಿ ಸಾಗಿದ್ದು ನಿಜ. ಅದನ್ನು ಸರಿಪಡಿಸಿದ್ದೇವೆ. ದಕ್ಷಿಣ ಕನ್ನಡ-ಉಡುಪಿಯಲ್ಲಿ ಸಮನ್ವಯದ ಕೊರತೆಯಿಂದ ಜನರಿಗೆ ಗೊಂದಲ ಆಗಿದ್ದು ನಿಜ. ಸೆ.22ರಂದು ಸಮೀಕ್ಷೆ ಆರಂಭವಾಗಿದ್ದು, ನಿಗದಿತ ದಿನದೊಳಗಡೆ ಸಮೀಕ್ಷೆ ಮುಗಿಯಲಿದೆ. ಸಮೀಕ್ಷೆ ಪೂರ್ಣಕ್ಕೆ ಎರಡು ದಿನವಷ್ಟೇ ಬಾಕಿ ಇದ್ದು, ಮುಂದಿನ ನಿರ್ಧಾರವನ್ನು ಆಯೋಗ ಸೂಚನೆಯ ಮೇರೆಗೆ ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ರಜೆಯಲ್ಲಿಯೇ ಸಮೀಕ್ಷೆ ಯಾಕೆ?
ರಜಾದಿನಗಳಲ್ಲಿಯೇ ಸಮೀಕ್ಷೆ ನಡೆಸಿದ್ದು ಯಾಕೆ ಎಂದು ಮಾಧ್ಯಮದವರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿ ಮಧು ಬಂಗಾರಪ್ಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದೆಂದು ರಜಾದಿನಗಳಲ್ಲಿಯೇ ಸಮೀಕ್ಷೆ ನಡೆಸುತ್ತಿದ್ದೇವೆ. ಇದಕ್ಕೆ ಕ್ಯಾಬಿನೆಟ್‌ನಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಟೀಚಿಂಗ್ ಟೈಮಲ್ಲಿ ಕೊಟ್ಟರೆ ಶಿಕ್ಷಕರಿಗೆ ಒತ್ತಡ ಆಗುತ್ತದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಮ್ಮ ನಿರ್ಧಾರ ಸರಿಯಾಗಿದೆ ಎಂದು ಸಮಜಾಯಿಷಿ ನೀಡಿದರು.
30 ಸಾವಿರ ಶಿಕ್ಷಕರ ನೇಮಕ
ರಾಜ್ಯದಲ್ಲಿ ಒಟ್ಟು 30 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು. 5000 ಶಿಕ್ಷಕರನ್ನು ಅನುದಾನಿತ ಶಾಲೆಗಳಿಗೆ ನೇಮಕಾತಿ ಮಾಡಲಾಗುವುದು. ಈ ವರ್ಷದಲ್ಲಿ 18 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗಿದೆ ಎಂದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನಾಲ್ಕು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಮರುಪರೀಕ್ಷೆ ಬರೆಯುವ ಮಕ್ಕಳಿಂದ ಶುಲ್ಕ ವಸೂಲಿ ಮಾಡುವುದಿಲ್ಲ. ಕೂಲಿ ಕಾರ್ಮಿಕರು, ಬಡವರ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ ಎಂದರು. ಅಲ್ಲದೆ ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿ ಉತ್ತಮ ಭವಿಷ್ಯ ರೂಪಿಸಲಾಗುವುದು ಎಂದರು.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ವಿಸ್ವಾಶ್ ಕುಮಾರ್ ದಾಸ್, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮುಖಂಡರಾದ ಪದ್ಮರಾಜ್.ಆರ್ ಪೂಜಾರಿ, ನೀರಜ್ ಚಂದ್ರಪಾಲ್, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.