ಕುಂದಾಪುರ: ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಆರೇಳು ಮಂದಿಯ ತಂಡ ಉಡುಪಿ ಜಿಲ್ಲೆಯ ಮರವಂತೆ ಸಮುದ್ರಕ್ಕೆ ಇಳಿದಿದ್ದು ಅಲೆಗಳ ರಭಸಕ್ಕೆ ಸಿಲುಕಿ ನೀರು ಪಾಲಾಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವದ ಹಂಗು ತೊರೆದು ಕೆ.ಎನ್.ಡಿ ಸಿಬ್ಬಂದಿ ನಿಶಾಂತ್ ಖಾರ್ವಿ ರಕ್ಷಿಸಿದ್ದು ಇವರಿಗೆ ಸ್ಥಳೀಯ ಮೀನುಗಾರ ವಿಷ್ಣುಖಾರ್ವಿ ಸಹಕಾರ ನೀಡಿದ್ದಾರೆ.

ಈ ಘಟನೆ ಮರವಂತೆ ಶ್ರೀ ವರಾಹಸ್ವಾಮೀ ದೇವಸ್ಥಾನದ ಎದುರಿನ ಸಮುದ್ರದಲ್ಲಿ ಶುಕ್ರವಾರ ಸಂಜೆ ನಡೆದಿದ್ದು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

ಅಲೆಗಳ ಅಬ್ಬರ ಜಾಸ್ತಿಯಿರುವ ಭಾಗದಲ್ಲಿ ಇಬ್ಬರು ಯುವಕರು ಕೊಚ್ಚಿಹೋಗಿದ್ದು ಅವರಲ್ಲಿ ಓರ್ವ ಬಹುತೇಕ ನೀರುಪಾಲಾಗಿದ್ದ. ಈ ವೇಳೆ ಕೆ.ಎನ್.ಡಿ ಸಿಬ್ಬಂದಿ ನಿಶಾಂತ್ ತಮ್ಮ ಜೀವದ ಹಂಗು ತೊರೆದು ಯುವಕರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಇವರಿಗೆ ಸ್ಥಳೀಯ ಮೀನುಗಾರ ವಿಷ್ಣು ಸಹಕಾರ ನೀಡಿದರು.
ಗಂಗೊಳ್ಳಿ ಪಿಎಸ್ಐ ಪವನ್ ನಾಯಕ್, ಕರಾವಳಿ ಕಾವಲು ಪಡೆಯ ಎಎಸ್ಐ ಮಂಜುನಾಥ್, ಸಿಬ್ಬಂದಿಗಳಾದ ಸವಿತಾ, ರಾಘವೇಂದ್ರ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.