ಪುತ್ತೂರು: ವಿವಾಹವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ನಡೆಸಿ ಗರ್ಭಿಣಿಯಾದ ಬಳಿಕ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಡಿಎನ್ಎ ಪರೀಕ್ಷೆಯ ವರದಿ ಹೊರಬಿದ್ದಿದ್ದು ವರದಿಯಲ್ಲಿ ಮಗುವಿನ ಮತ್ತು ಬಿಜೆಪಿ ನಾಯಕನ ಪುತ್ರ ಆರೋಪಿ ಶ್ರೀ ಕೃಷ್ಣನ ರಕ್ತದ ಮಾದರಿ ಹೊಂದಿಕೆಯಾಗಿದ್ದು, ಆತನೇ ಮಗುವಿನ ತಂದೆ ಎಂಬುದು ಸ್ಪಷ್ಟಗೊಂಡಿದೆ. ಈ ಮಾಹಿತಿಯನ್ನು ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು ಇಂದು(ಸೆ.27) ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸಿದರು.
ಬಿಜೆಪಿ ಮುಖಂಡ ಪಿಜಿ ಜಗನ್ನಿವಾಸ್ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಮಗುವಿನ ತಂದೆ ಎಂಬ ವರದಿ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಬಗ್ಗೆ ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಲಾಗಿದೆ ಎಂಬ ಮಾಹಿತಿ ನೀಡಿದ ಅವರು, ಸಮಾಜದ ಬಡ ಹೆಣ್ಣುಮಗಳ ವಿರುದ್ಧ ಅನ್ಯಾಯ ನಡೆದಿದೆ. ಹಿಂದಿನ ಕಾಲದಲ್ಲಿ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆದಿತ್ತು. ಇಂದಿನ ಕಾಲದಲ್ಲಿ ಡಿಎನ್‌ಎ ಪರೀಕ್ಷೆಯೇ ಅಂತಿಮ ಸತ್ಯ. ಈ ಪ್ರಕರಣದಲ್ಲೂ ವರದಿ ಸ್ಪಷ್ಟವಾಗಿ ಬಂದಿದೆ ಮತ್ತು ಈಗಾಗಲೇ ಕೋರ್ಟ್‌ಗೆ ಸಲ್ಲಿಕೆಯಾಗಿದೆ ಎಂದು ಅವರು ಹೇಳಿದರು.
“ಪಿಜಿ ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯೊಂದಿಗೆ ವಿವಾಹವಾಗುವುದು ನಮ್ಮ ಒತ್ತಾಯವಾಗಿದೆ. ಮದುವೆಯಾಗುವುದು ಇಬ್ಬರಿಗೂ ಉತ್ತಮ. ನಮಗೆ ಕೋರ್ಟ್ ಪ್ರಕ್ರಿಯೆ ಬೇಕಾಗಿಲ್ಲ. ಆದರೂ ಈ ವಿಚಾರದಲ್ಲಿ ಕಾನೂನು ತನ್ನ ಮಾರ್ಗದಲ್ಲಿ ಸಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದುತ್ವದ ಬಗ್ಗೆ ಮಾತನಾಡುವ ಆರ್‌ಎಸ್ಎಸ್ , ಬಜರಂಗದಳ, ಶ್ರೀ ರಾಮ ಸೇನೆಗಳು ಹಾಗೂ ಹಿಂದುತ್ವ ಮುಖಂಡರು ಅನ್ನಿಸಿಕೊಂಡ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಿಂದು ಸಮುದಾಯದ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ ಆಚಾರ್ಯ ಮತ್ತು ಸಂಘದ ಪ್ರಮುಖರು ಉಪಸ್ಥಿತರಿದ್ದರು.