ಬೀಚ್‌ನಲ್ಲಿ ಕೊಳೆತ ಶವ ಪತ್ತೆ: 4 ಕಿ.ಮೀ. ದೂರ ಹೆಗಲ ಮೇಲೆ ಹೊತ್ತೈದ ಮೊಗವೀರಪಟ್ಣದ ಶಿವಾಜಿ ಸಂಘದ ಸದಸ್ಯರು

ಮಂಗಳೂರು: ಉಳ್ಳಾಲದ ಮೊಗವೀರಪಟ್ಣದ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಸುಮಾರು 4 ಕಿಲೋಮೀಟರ್ ದೂರ ತಮ್ಮ ಹೆಗಲ ಮೇಲೆ ಹೊತ್ತು ಸಾಗಿಸಿ ಆಂಬುಲೆನ್ಸ್ ಗೆ ಹಸ್ತಾಂತರಿಸಿ ಮಾನವೀಯತೆ ಪ್ರದರ್ಶಿಸಿದ್ದಾರೆ.

ಶುಕ್ರವಾರ(ಸೆ.26) ತಡರಾತ್ರಿ, ಅಳಿವೆಬಾಗಿಲು ಬ್ರೇಕ್‌ವಾಟರ್ ಬಂಡೆಗಳ ಬಳಿ ಬಲೆ ಬೀಸಿದ್ದ ಮೀನುಗಾರರಿಗೆ ಬಂಡೆಗಳ ನಡುವೆ ಸಿಲುಕಿದ್ದ ಕೊಳೆತ ಸ್ಥಿತಿಯ ಮೃತದೇಹವೊಂದು ಕಂಡುಬಂದಿದೆ. ಅವರು ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸಂದೇಶ ಸ್ವೀಕರಿಸಿದ ಉಳ್ಳಾಲ ಪೊಲೀಸರು ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರಿಗೆ ಮಾಹಿತಿ ರವಾನಿಸಿದರು.

ಪೊಲೀಸರ ಕರೆಗೆ ಸ್ಪಂದಿಸಿದ ಸದಸ್ಯರಾದ ಯೋಗೀಶ್ ಅಮೀನ್, ಪ್ರಸಾದ್ ಸುವರ್ಣ ಮತ್ತು ಚಂದ್ರಹಾಸ್ ಸುವರ್ಣ ಅವರು ಸ್ಥಳಕ್ಕೆ ಧಾವಿಸಿ ಕೊಳೆತ ದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು, ಕಠಿಣವಾದ ಕಡಲ ತೀರದ ಮೂಲಕ ಸುಮಾರು 3 ರಿಂದ 4 ಕಿ.ಮೀ. ದೂರ ಸಾಗಿಸಿ, ಬಳಿಕ ಆಂಬುಲೆನ್ಸ್ ಗೆ ತಲುಪಿಸಿದರು.

ಪತ್ತೆಯಾದ ಮೃತದೇಹ ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಮಂಗಳೂರು ಬಂದರಿನಿಂದ ಮೀನುಗಾರಿಕೆ ದೋಣಿಯಲ್ಲಿ ತೆರಳಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ದೋಣಿಯಿಂದ ಬಿದ್ದು ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆತನ ನಾಪತ್ತೆ ಕುರಿತು ಹಾರ್ಬರ್ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಪತ್ತೆಯಾದ ಮೃತದೇಹವು ಅದೇ ವ್ಯಕ್ತಿಯದ್ದಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

error: Content is protected !!