ಮೈಸೂರು: ಕನ್ನಡದ ಮೇರು ಸಾಹಿತಿ, ಕಾದಂಬರಿಕಾರ, ಪದ್ಮಭೂಷಣ ಡಾ. ಎಸ್ಎಲ್ ಭೈರಪ್ಪ (SL Bhyrappa) ಅವರು ಶುಕ್ರವಾರ ಪಂಚಭೂತಗಳಲ್ಲಿ ಲೀನರಾದರು. ಅಂತ್ಯಸಂಸ್ಕಾರದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಕೇಂದ್ರದ ಪ್ರತಿನಿಧಿಯಾಗಿ ಭಾಗವಹಿಸಿ ಕೇಂದ್ರ ಸರ್ಕಾರದ ಪರವಾಗಿ ಅಂತಿಮ ನಮನ, ಗೌರವಾರ್ಪಣೆ ಸಲ್ಲಿಸಿದರು.
ಓರ್ವ ಧೀಮಂತ ಸಾಹಿತಿ, ಸಂಶೋಧಕರನ್ನು ಭಾರತ ಕಳೆದುಕೊಂಡಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶೋಕ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಪ್ರಸಿದ್ಧ ಲೇಖಕ, ಪದ್ಮವಿಭೂಷಣ, ಪದ್ಮಶ್ರೀ ಡಾ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಗಲು ಭೈರಪ್ಪ ಅವರ ಒಡನಾಡಿ, ಕೇಂದ್ರ ಸಂಪುಟದ ಹಿರಿಯ ಸಚಿವ ಪ್ರಲ್ಹಾದ್ ಜೋಶಿ ಅನ್ನು ನೇಮಿಸಲಾಗಿತ್ತು.
ಸಚಿವ ಪ್ರಲ್ಹಾದ್ ಜೋಶಿ ಇಂದು ಬೆಳಗ್ಗೆ 11 ಗಂಟೆಗೆ ಮೈಸೂರಿನಲ್ಲಿರುವ ಭೈರಪ್ಪ ಅವರ ಸ್ವಗೃಹಕ್ಕೆ ತೆರಳಿ ಅವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಶೋಕ ಸಂದೇಶವನ್ನು ತಲುಪಿಸುವುದರೊಂದಿಗೆ ಕೇಂದ್ರ ಸರ್ಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿದ ಅಂತ್ಯಕ್ರಿಯೆಯಲ್ಲಿ ಕೂಡ ಸಚಿವ ಜೋಶಿ ಭಾಗಿಯಾಗಿ ಅಂತಿಮ ಶೃದ್ಧಾಂಜಲಿ ಸಲ್ಲಿಸಿದರು.
ಅನಾರೋಗ್ಯ ಅಂತಾ ಆಸ್ಪತ್ರೆ ಸೇರಿದ್ದ ಸಾಹಿತಿ ಎಸ್.ಎಲ್.ಭೈರಪ್ಪ ಹೃದಯಾಘಾತದಿಂದ ಸೆ. 24ರಂದು ವಿಧಿವಶರಾದರು. ಸದ್ಯ ಮೈಸೂರಿನ ಚಾಮುಂಡಿ ತಪ್ಪಲಿನ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಪಂಚಭೂತಗಳಲ್ಲಿ ಲೀನರಾಗಿದರು. ಸಕಲ ಸರ್ಕಾರಿ ಗೌರವದೊಂದಿಗೆ ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಗುರುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ರವೀಂದ್ರ ಕಲಾಕ್ಷೇತ್ರದ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ಸ್ಥಳಾಂತರಿಸಲಾಗಿತ್ತು. ಇಂದು ಮೈಸೂರಿನ ಕಲಾಮಂದಿರದಲ್ಲೂ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.