ಅರಂತೋಡು: ಅಡಿಕೆ ವ್ಯಾಪಾರಿಯ ಗೋಡೌನ್ ನಿಂದ ಸುಮಾರು 12 ಕ್ವಿಂಟಾಲ್ ಸುಲಿದ ಅಡಿಕೆ ಕಳವಾದ ಘಟನೆ ಅಜ್ಜಾವರ ಗ್ರಾಮದ ಬಯಂಬು ಎಂಬಲ್ಲಿ ಸೆ.12ರ ರಾತ್ರಿ ನಡೆದಿದ್ದು, ಸೆ.13ರ ಶನಿವಾರ ಬೆಳಿಗ್ಗೆ ವರದಿಯಾಗಿದೆ.
ಅಜ್ಜಾವರ ಗ್ರಾಮದ ವೆಲ್ ಕಮ್ ಮನೆಯ ನಿವಾಸಿ, ಮಹಮ್ಮದ್ ರಫೀಕ್ ಎಸ್.ಡಿ. ಘಟನೆಯ ಕುರಿತು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಮ್ಮದ್ ರಪೀಕ್ ಅವರು ವ್ಯಾಪಾರ ಮತ್ತು ಕೃಷಿ ಕೆಲಸ ಮಾಡಿಕೊಂಡಿದ್ದು, ಜಮೀನಿನಲ್ಲಿ ಬೆಳೆದ ಅಡಿಕೆಗಳನ್ನು ಅಜ್ಜಾವರ ಗ್ರಾಮದ ಬಯಂಬು ಭಾಸ್ಕರ ರಾವ್ ಅವರಿಗೆ ಸೇರಿದ ಕಟ್ಟಡದಲ್ಲಿ ಸುಮಾರು 2 ವರ್ಷಗಳಿಂದ ದಾಸ್ತಾನು ಮಾಡಿಕೊಂಡಿದ್ದರು.ದಾಸ್ತಾನು ಇಟ್ಟಿರುವ ಅಡಿಕೆಗಳನ್ನು ಸುಲಿದು ಗೋಣಿ ಚೀಲದಲ್ಲಿ ಕಟ್ಟಿ ಇರಿಸಿದ್ದರು. ಸೆ.10ರಂದು ಅವರು ಕಾಸರಗೋಡಿನ ಅವರ ಮನೆಗೆ ಹೋಗಿದ್ದು, ಸೆ.12 ರಂದು ರಾತ್ರಿ ಸುಮಾರು 3 ಗಂಟೆಗೆ ಅವರ ಮನೆಯ ಜೀಪ್ ಚಾಲಕ ಹಸೈನಾರ್ ಕರೆ ಮಾಡಿ ಗೋಡೌನ್ ನಿಂದ ಯಾರೋ ಅಡಿಕೆ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದರು.
ಈ ಸಮಯ ವಾಹನದ ಶಬ್ದ ಕೇಳಿ ರಪೀಕ್ ಅವರ ತಂದೆ ಮನೆಯಿಂದ ಹೊರಗೆ ಬಂದು ನೋಡಿದಾಗ ಕಳ್ಳರು ಅಲ್ಲಿಂದ ವಾಹನದಲ್ಲಿ ಪರಾರಿ ಆಗಿದ್ದರು.
ತಕ್ಷಣ ಅವರು ಕಾಸರಗೋಡಿನಿಂದ ಅಜ್ಜಾವರಕ್ಕೆ ಬಂದು ಗೋಡೌನ್ ಪರಿಶೀಲಿಸಿದಾಗ ಕಳವಾಗಿರುವುದು ಗಮನಕ್ಕೆ ಬಂದಿದೆ. ದಾಸ್ತಾನು ಇರಿಸಿದ್ದ ಸುಮಾರು 33 ಕ್ವಿಂಟಾಲ್ ಅಡಿಕೆಯ ಪೈಕಿ 12 ಕ್ವಿಂಟಾಲ್ ಅಡಿಕೆ ಕಡಿಮೆ ಇರುವುದು ಕಂಡು ಬಂದಿದೆ ಎನ್ನಲಾಗಿದೆ.
ರಪೀಕ್ ಅವರು ದಾಸ್ತಾನು ಇಟ್ಟಿರುವ ಸುಮಾರು 12 ಕ್ವಿಂಟಲ್ ಅಡಿಕೆಯನ್ನು ಕೊಠಡಿಯ ಬಾಗಿಲು ದೂಡಿ ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದಾರೆ.
ಅಡಿಕೆಯ ಅಂದಾಜು ಬೆಲೆ 5,00,000/- ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.