ದುಬೈ: ನಾಳೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್ 2025 ಕ್ರೀಡಾಕೂಟ ಅಭಿಮಾನಿಗಳು ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ. ಇದುವರೆಗೆ ನಡೆದ ನಾಲ್ಕು ಪಂದ್ಯಗಳಿಗೆ ಕ್ರೀಡಾಂಗಣಗಳಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ ಹಾಜರಾಗಿದ್ದರೆ, ನಾಳಿನ ಪಂದ್ಯಾಟದಲ್ಲಿ ಸ್ಟೇಡಿಯಂ ಖಾಲಿ ಹೊಡೆಯುವ ಲಕ್ಷಣ ಕಾಣಿಸಿದೆ. ಶತ್ರು ರಾಷ್ಟ್ರದೊಂದಿಗೆ ಪಂದ್ಯ ನಡೆಯುವುದಕ್ಕೆ ಭಾರತೀಯರ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಪ್ರಚಾರದ ಕೊರತೆ, ದುಬಾರಿ ಟಿಕೆಟ್ ದರ ಮತ್ತು ಸ್ಟಾರ್ ಆಟಗಾರರ ಗೈರು – ಇವುಗಳೇ ಅಭಿಮಾನಿಗಳ ನಿರಾಸಕ್ತಿ ತೋರಲು ಪ್ರಮುಖ ಕಾರಣಗಳೆಂದು ಚರ್ಚೆಗಳಾಗುತ್ತಿದೆ.
ನಷ್ಟಕ್ಕೆ ಸಿಲುಕಿದ ಆಯೋಜಕರು
ಭಾರತ–ಪಾಕಿಸ್ತಾನ ಕದನ ಎಂದರೆ ಸಾಮಾನ್ಯವಾಗಿ ಟಿಕೆಟ್‌ಗಳು ವಾರಗಳ ಮುಂಚೆಯೇ ಸೋಲ್ಡ್ ಔಟ್ ಗುತ್ತಿತ್ತು. ಬ್ಲ್ಯಾಕ್ ಮಾರ್ಕೆಟ್‌ನಲ್ಲೂ ದರ ಗಗನಕ್ಕೇರುತ್ತಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ 14ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೂ ಇನ್ನೂ ಅರ್ಧದಷ್ಟು ಟಿಕೆಟ್‌ಗಳು ಮಾರಾಟವಾಗದೆ ಉಳಿದಿವೆ. ಆಯೋಜಕರು ಈ ಪಂದ್ಯದಿಂದಲೇ ಇದುವರೆಗಿನ ನಷ್ಟವನ್ನು ಪೂರೈಸಿಕೊಳ್ಳುವ ನಿರೀಕ್ಷೆ ಇಟ್ಟಿದ್ದರು. ಆದರೆ ಟಿಕೆಟ್‌ಗಳ ಮಾರಾಟ ಕುಂಠಿತವಾಗಿರುವುದರಿಂದ ಆಯೋಜಕರು ಮತ್ತೆ ನಷ್ಟದ ಸುಳಿಯಲ್ಲಿ ಸಿಲುಕುವ ಭೀತಿ ಎದುರಾಗಿದೆ.
ಪಂದ್ಯಕ್ಕೂ ಅಭಿಮಾನಿಗಳ ಬರದ ಇನ್ನೊಂದು ಪ್ರಮುಖ ಕಾರಣ ಟಿಕೆಟ್ ದರ. ವಿಐಪಿ ಸೂಟ್ಸ್ ಎರಡು ಟಿಕೆಟ್‌ಗಳಿಗೆ 2.5 ಲಕ್ಷ ರೂ., ರಾಯಲ್ ಬಾಕ್ಸ್ 2.3 ಲಕ್ಷ ರೂ., ಸ್ಕೈ ಬಾಕ್ಸ್ 1.6 ಲಕ್ಷ ರೂ.ಗಳಿಗೆ ನಿಗದಿಯಾಗಿದೆ. ಪ್ಲಾಟಿನಂ ಟಿಕೆಟ್ ದರ 75,659 ರೂ. ಇದ್ದು, ಸಾಮಾನ್ಯ ಅಭಿಮಾನಿಗಳಿಗೆ ಲಭ್ಯವಿರುವ ಕನಿಷ್ಠ ದರದ ಟಿಕೆಟ್ ಕೂಡ ಇಬ್ಬರಿಗೆ 10,000 ರೂ. ಆಗಿದೆ. ಹೀಗಾಗಿ ದುಬಾರಿ ದರ ಅಭಿಮಾನಿಗಳನ್ನು ದೂರ ಮಾಡುತ್ತಿದೆ.
ಇನ್ನೊಂದು ಪ್ರಮುಖ ಕಾರಣ – ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಸೆಳೆಯುವ ಶಕ್ತಿ ಹೊಂದಿದ್ದ ಸ್ಟಾರ್ ಆಟಗಾರರ ಕೊರತೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ಏಷ್ಯಾ ಕಪ್‌ನಲ್ಲಿ ಕಾಣಿಸಿಕೊಂಡಿಲ್ಲ. ಇವರನ್ನು ನೋಡುವುದಕ್ಕಾಗಿಯೇ ಸಾವಿರಾರು ಅಭಿಮಾನಿಗಳು ಬರುವ ಅಭ್ಯಾಸ ಇತ್ತು. ಪಾಕಿಸ್ತಾನ ತಂಡದಲ್ಲೂ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಜ್ವಾನ್ ಗೈರಾಗಿರುವುದರಿಂದ ಪ್ರೇಕ್ಷಕರ ಕುತೂಹಲ ಇನ್ನಷ್ಟು ಕುಂದಿದೆ.