ಇಂಫಾಲ್: 2023ರ ಜನಾಂಗೀಯ ಹಿಂಸಾಚಾರದ ಬಳಿಕ ಮೊದಲ ಬಾರಿಗೆ ಮಣಿಪುರಕ್ಕೆ ಕಾಲಿಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದ ಜನತೆಗೆ ಶಾಂತಿಯ ಹಾದಿ ಹಿಡಿಯುವಂತೆ ಮನವಿ ಮಾಡಿದರು. “ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಶಾಂತಿಯೇ ಮಾರ್ಗ. ನಾನು ಮತ್ತು ಭಾರತ ಸರ್ಕಾರ ನಿಮ್ಮೊಂದಿಗಿದ್ದೇವೆ” ಎಂದು ಭರವಸೆ ನೀಡಿದ ಅವರು, ಶಾಂತಿ, ಸ್ಥಿರತೆ, ನ್ಯಾಯ ಮತ್ತು ಸತ್ಯವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ಒತ್ತಿಹೇಳಿದರು.

ಇಂದು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಮಣಿಪುರ ಭಾರತದ ಪ್ರಗತಿಯ ಪ್ರಮುಖ ಸ್ತಂಭ. ಮಣಿಪುರದ ಭೂಮಿ ಧೈರ್ಯ ಮತ್ತು ದೃಢಸಂಕಲ್ಪದ ಸಂಕೇತ. ಈ ಬೆಟ್ಟಗಳು ಪ್ರಕೃತಿಯ ಅಮೂಲ್ಯ ಕೊಡುಗೆ ಮಾತ್ರವಲ್ಲ, ಜನರ ಪರಿಶ್ರಮದ ಪ್ರತೀಕವೂ ಆಗಿವೆ. ಮಣಿಪುರದ ಚೈತನ್ಯಕ್ಕೆ ನಾನು ವಂದಿಸುತ್ತೇನೆ” ಎಂದರು.

ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರಧಾನಮಂತ್ರಿ ಮೋದಿ, ಚುರಾಚಂದ್‌ಪುರದಲ್ಲಿ ₹7,300 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದರು.
₹3,600 ಕೋಟಿ ಮೌಲ್ಯದ ರಸ್ತೆ, ಒಳಚರಂಡಿ ಮತ್ತು ಆಸ್ತಿ ನಿರ್ವಹಣಾ ಸುಧಾರಣಾ ಯೋಜನೆ, ₹2,500 ಕೋಟಿ ವೆಚ್ಚದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಮಣಿಪುರ ಇನ್ಫೋಟೆಕ್ ಡೆವಲಪ್ಮೆಂಟ್ (MIND) ಯೋಜನೆ, 9 ಸ್ಥಳಗಳಲ್ಲಿ ಮಹಿಳಾ ಹಾಸ್ಟೆಲ್‌ಗಳ ನಿರ್ಮಾಣ -ಈ ಯೋಜನೆಗಳು ರಾಜ್ಯದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗಲಿವೆ ಎಂದು ಮೋದಿ ಹೇಳಿದರು.
ನಿರಾಶ್ರಿತರಿಗೆ ಮನೆ, ವಿಶೇಷ ಪ್ಯಾಕೇಜ್
ಹಿಂಸಾಚಾರದ ಪರಿಣಾಮವಾಗಿ ಮನೆಯನ್ನು ಕಳೆದುಕೊಂಡವರಿಗಾಗಿ ಕೇಂದ್ರ ಸರ್ಕಾರ 7,000 ಹೊಸ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಲಿದೆ. ಸಂತ್ರಸ್ತ ಕುಟುಂಬಗಳ ನೆರವಿಗಾಗಿ ಹಾಗೂ ಬುಡಕಟ್ಟು ಯುವಕರಿಗೆ ಬೆಂಬಲ ನೀಡಲು ₹3,000 ಕೋಟಿ ವಿಶೇಷ ಪ್ಯಾಕೇಜ್ ಅನುಮೋದಿಸಲಾಗಿದೆ ಎಂದರು.
“ಮಣಿಪುರದಲ್ಲಿ ಬದುಕನ್ನು ಮತ್ತೆ ಹಳಿಗೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಭಾರತ ಸರ್ಕಾರ ಮಾಡುತ್ತಿದೆ. ಹಿಂಸಾಚಾರದ ಸ್ಮರಣೆಗಳನ್ನು ತೊರೆದು, ಶಾಂತಿಯುತ ಬದುಕಿಗೆ ಜನರು ಹೆಜ್ಜೆ ಇಡಬೇಕು” ಎಂದು ಪ್ರಧಾನಮಂತ್ರಿ ಮೋದಿ ಕರೆ ನೀಡಿದರು.