ದುಬೈ: ಸೆಪ್ಟೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಏಷ್ಯಾ ಕಪ್ 2025 ಪಂದ್ಯಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಪಂದ್ಯವನ್ನು ವೀಕ್ಷಿಸಬಾರದು ಎಂಬ ಟ್ರೆಂಡ್ ಶುರುವಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ತಂಡ ಕರಾಚಿ ಕಿಂಗ್ಸ್ ಸಾಮಾಜಿಕ ಮಾಧ್ಯಮದಲ್ಲಿ ಚೆಸ್ ಗ್ರಾಫಿಕ್ ಹಾಕಿರುವುದೇ ವಿವಾದ ತೀವ್ರತೆ ಪಡೆಯಲು ಕಾರಣ! ಈ ಚಿತ್ರದಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಚೆಸ್ ಬೋರ್ಡ್‌ನಲ್ಲಿ ಕುಳಿತಿದ್ದು, ಎದುರಾಳಿಯ ಸ್ಥಾನವನ್ನು ಕಪ್ಪು ಸಿಲೂಯೆಟ್(ನೆರಳುಚಿತ್ರ) ಆಗಿ ತೋರಿಸಲಾಗಿತ್ತು. ಭಾರತದ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಇತ್ತೀಚೆಗೆ ಪಂದ್ಯದ ಪ್ರಚಾರಕ್ಕಾಗಿ ಈ ರೀತಿ ಮಾಡಿತ್ತು.
ಕರಾಚಿ ಕಿಂಗ್ಸ್‌ನ ಪೋಸ್ಟ್‌ಗೆ ಆನ್‌ಲೈನ್‌ನಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದಂತೆಯೇ ಫ್ರಾಂಚೈಸಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಕಾಮೆಂಟ್ ವಿಭಾಗವನ್ನೇ ನಿಷ್ಕ್ರಿಯಗೊಳಿಸಿದೆ.
ಇದೇ ವೇಳೆಯಲ್ಲಿ, ಪಂದ್ಯಾಟದ ಬಗ್ಗೆ ವಿವಾದಗಳು ಭುಗಿಲೆದ್ದಿದ್ದು, ಅದೀಗ ಭಾರತದ ಸುಪ್ರೀಂ ಕೋರ್ಟ್‌ಗೆ ತಲುಪಿದೆ. ಭಯೋತ್ಪಾದನೆ ಹಿನ್ನಲೆ ಮತ್ತು ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ಉಲ್ಲೇಖಿಸಿ, ಭಾರತ–ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಲು ಮನವಿ ಸಲ್ಲಿಸಲಾಗಿದೆ. ಫಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವುದು ಸೈನಿಕರ ತ್ಯಾಗಕ್ಕೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
“ಸೈನಿಕರು ಪ್ರಾಣತ್ಯಾಗ ಮಾಡುತ್ತಿರುವ ಸಮಯದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶದೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ತಪ್ಪು ಸಂದೇಶವನ್ನು ಕಳುಹಿಸುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆದರೆ ತುರ್ತು ವಿಚಾರಣೆಗಾಗಿ ಮನವಿ ಸಲ್ಲಿಸಿದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ.
ಇತ್ತ, ಮೈದಾನದಲ್ಲಿ ನಿರೀಕ್ಷೆಗಳು ತೀವ್ರಗೊಂಡಿವೆ. ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಯುಎಇಯನ್ನು ಸೋಲಿಸಿದ್ದು, ಪಾಕಿಸ್ತಾನ ಒಮಾನ್ ವಿರುದ್ಧ ಜಯ ಸಾಧಿಸಿದೆ. ಫಲಿತಾಂಶಗಳನ್ನು ಅವಲಂಬಿಸಿ, ಈ ಶಾಶ್ವತ ಎದುರಾಳಿಗಳು ಏಷ್ಯಾ ಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದ್ದು, ರಾಜಕೀಯ–ಕ್ರೀಡೆಗಳ ಚರ್ಚೆ ದುಬೈನಾಚೆಯೂ ಗದ್ದಲ ಸೃಷ್ಟಿಸುವುದು ಖಚಿತವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಪಂದ್ಯಾಟವನ್ನು ವೀಕ್ಷಿಸುವುದು ದೇಶದ್ರೋಹಕ್ಕೆ ಸಮ ಎಂದು ಚರ್ಚೆಯಾಗುತ್ತಿದೆ.