ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಆರೋಪಿ ಸೆರೆ

ಉಡುಪಿ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಚಿನ್ನದ ಎಗರಿಸಿದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸುನಿಲ್ ರಮೇಶ್ ಲಮಾಣಿ(29) ಬಂಧಿತ ಆರೋಪಿಯಾಗಿದ್ದು, ಈತನಿಂದ ಕಳವು ಮಾಡಿದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಳ್ಳಲಾಗಿದೆ.

ಸೆ.9ರಂದು ಕಾರ್ಕಳ ಎಳ್ಳಾರೆ ಗ್ರಾಮದ ಮುಳ್ಕಾಡು ನಿವಾಸಿ ಕುಮುದಾ ಶೆಟ್ಟಿ(80) ಎಂಬವರು ಮನೆಯ ಅಂಗಳ ದಲ್ಲಿ ಕುಳಿತುಕೊಂಡಿದ್ದರು. ಆಗ ತಾನು ಕಾರ್ಕಳದ ಸೂಪರ್‌ವೈಸರ್ ಎಂದು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ, ಮನೆಯಲ್ಲಿ ಸಿಸಿ ಕ್ಯಾಮರಾ ಇದೆಯೇ ಎಂದು ವಿಚಾರಿಸಿದನು. ಬಳಿಕ ಆತ ಕುಮುದಾರ ಹತ್ತಿರ ಬಂದು ಒಮ್ಮೆಲೇ ಬಲತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ ಅವರನ್ನು ನೆಲಕ್ಕೆ ದೂಡಿದ್ದು, ನಂತರ ಅವರ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ರೋಪ್ ಚೈನನ್ನು ಕಿತ್ತುಕೊಂಡು ಓಡಿ ಹೋಗಿರುವುದಾಗಿ ದೂರಲಾಗಿದೆ.

ಇದರಿಂದ ಕುಮುದಾ ಗಾಯಗೊಂಡಿದ್ದು, ಕಾರ್ಕಳ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿಸಲಾಗಿದೆ. ಕಳವಾದ ಚಿನ್ನದ ರೋಪ್ ಚೈನಿನ ಮೌಲ್ಯ 1,75,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೆತ್ತಿಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಡಿ.ಮಂಜಪ್ಪ ನೇತೃತ್ವದ ಅಜೆಕಾರು ಎಸ್ಸೈ ಮಹೇಶ್ ಹಾಗೂ ಸಿಬ್ಬಂದಿಯವರ ತಂಡ ಆರೋಪಿ ಸುನಿಲ್ ರಮೇಶ್ ಲಮಾಣಿಯನ್ನು ಬಂಧಿಸಿದೆ. ಆರೋಪಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!