ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ನ್ಯಾಯಾಲಯಕ್ಕೆ ವಂಚನೆ ಮಾಡುತ್ತಿದ್ದ ಆರೋಪಿಗಳು ಬಲೆಗೆ

ಮಂಗಳೂರು: ಮಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ನಕಲಿ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ವಂಚನೆ ಮಾಡುತ್ತಿದ್ದ ಆರೋಪಿಗಳ ಜಾಲ ಬಯಲಾಗಿದ್ದು ಹಲವರನ್ನು ಬಂಧಿಸಿದ್ದಾರೆ. ಆರೋಪಿಗಳು ನಕಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ತಯಾರಿಸಿ, ಅವುಗಳನ್ನು ನೈಜ ದಾಖಲೆಗಳೆಂದು ತೋರಿಸಿ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿದ್ದವರಿಗೆ ಜಾಮೀನು ನೀಡುವ ಕೃತ್ಯದಲ್ಲಿ ತೊಡಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಈ ಬಗ್ಗೆ ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 9ರಂದು ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ದುಲ್ ರೆಹಮಾನ್ (46)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆತನ ಮಾಹಿತಿ ಆಧರಿಸಿ ನಕಲಿ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಸಹಕರಿಸುತ್ತಿದ್ದ ನಿಶಾಂತ್ ಕುಮಾರ್ (28)ನನ್ನೂ ಪೊಲೀಸರು ಬಂಧಿಸಿದರು. ತನಿಖೆ ವಿಸ್ತರಿಸಿದಂತೆ, ನಕಲಿ ಗುರುತಿನ ಆಧಾರದ ಮೇಲೆ ನ್ಯಾಯಾಲಯದಲ್ಲಿ ಜಾಮೀನು ನೀಡಿದ ಪ್ರಕರಣಗಳಲ್ಲಿ ನಿತೀನ್ ಕುಮಾರ್ (31), ಹಸನ್ ರಿಯಾಜ್ (46) ಹಾಗೂ ಮಹಮ್ಮದ್ ಹನೀಫ್ (39)ರನ್ನೂ ಬಂಧಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿತರು ನಕಲಿ ಆಧಾರ್ ಕಾರ್ಡ್‌ಗಳಲ್ಲಿ ತಮ್ಮ ಫೋಟೋ ಅಂಟಿಸಿಕೊಂಡು, ನಿಜವಾದ ವ್ಯಕ್ತಿಗಳಂತೆ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದರು. ಈ ಮೂಲಕ ಬಂಧಿತರಾಗಿದ್ದವರಿಗೆ ಜಾಮೀನು ದೊರಕುವಂತೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ವಂಚನೆ ನಡೆಸಿರುವುದು ಬಹಿರಂಗವಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ 24/22 ಮತ್ತು 46/22 ಪ್ರಕರಣಗಳಲ್ಲಿಯೂ ಇದೇ ರೀತಿಯ ಮೋಸ ನಡೆದಿರುವುದು ಪತ್ತೆಯಾಗಿದೆ.

ಉರ್ವ ಠಾಣೆಯಲ್ಲಿ ಅಬ್ದುಲ್ ರೆಹಮಾನ್, ನಿಶಾಂತ್ ಕುಮಾರ್ ಮಂಗಳೂರು ಉತ್ತರ ಠಾಣೆಯಲ್ಲಿ ಬಂಧಿತರೆಂದರೆ – ನಿತೀನ್ ಕುಮಾರ್, ಹಸನ್ ರಿಯಾಜ್ ಮತ್ತು ಮಹಮ್ಮದ್ ಹನೀಫ್. ಇವರ ಜೊತೆ ನಕಲಿ ದಾಖಲಾತಿಗಳ ವಂಚನೆಗೆ ಸಹಕರಿಸುತ್ತಿದ್ದ ಬ್ರೋಕರ್ ಹನೀಫ್ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಹೆಚ್.ಎನ್., ಐಪಿಎಸ್ ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್, KSPS ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ.

error: Content is protected !!