ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಅಪರಾಧ ಪತ್ತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಮೆರೆದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗುರುತಿಸಿ ಶುಕ್ರವಾರ ಜಿಲ್ಲಾ ಕವಾಯತು ಮೈದಾನದಲ್ಲಿ ಪೊಲೀಸ್ ಆಯುಕ್ತರಾಗಿರುವ ಸುಧೀರ್ ಕುಮಾರ್ ರೆಡ್ಡಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ 32 ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ 121 ಸಿಬ್ಬಂದಿಗಳಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ನಗರದ ಶಾಂತಿ ಕಾಪಾಡಲು ನೆರವಾದ 19 ವಿಶೇಷ ಕಾರ್ಯಪಡೆಯ ಸಿಬ್ಬಂದಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಒಟ್ಟು 32 ಅಧಿಕಾರಿ ಮತ್ತು 140 ಸಿಬ್ಬಂದಿ ಪ್ರಶಂಸನಾ ಪತ್ರಕ್ಕೆ ಪಾತ್ರರಾದರು.
ಪ್ರಶಸ್ತಿ ವಿತರಿಸಿದ ಬಳಿಕ ಮಾತನಾಡಿದ ಪೊಲೀಸ್ ಆಯುಕ್ತರು, “ನಗರದಲ್ಲಿ ಶಾಂತಿ ಕಾಪಾಡಲು, ಅಪರಾಧ ಪತ್ತೆ ಮತ್ತು ಕಾನೂನು ಸುವ್ಯವಸ್ಥೆ ಸುಧಾರಣೆಯಲ್ಲಿ ಪೊಲೀಸರು ತೋರಿದ ಶ್ರಮ ಶ್ಲಾಘನೀಯ. ಈ ಗೌರವವು ಅವರ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದು ತಿಳಿಸಿದರು.
ಪೊಲೀಸರ ಸಾಧನೆಗೆ ಸಂದ ಗೌರವ
ಕಳೆದ ಮೂರು ತಿಂಗಳಲ್ಲಿ ಮಂಗಳೂರು ಪೊಲೀಸರು ಹಲವು ಪ್ರಮುಖ ಸಾಧನೆಗಳನ್ನು ದಾಖಲಿಸಿದ್ದಾರೆ. ಮುಲ್ಕಿ ಠಾಣಾ ಸರಹದ್ದಿನ 27 ವರ್ಷದ ಹಿಂದಿನ ಮತೀಯ ಗಲಭೆ ಪ್ರಕರಣ ಸೇರಿ ಅನೇಕ ಹಳೆಯ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದು, ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 52 ಎನ್‌ಬಿಡಬ್ಲ್ಯೂ ವಾರಂಟು ಅಸಾಮಿಗಳನ್ನು ಬಂಧಿಸಲಾಗಿದೆ. ಸೊತ್ತು ಕಳವು ಪ್ರಕರಣಗಳಲ್ಲಿ 39 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವುದರೊಂದಿಗೆ ಒಂದು ಕೋಟಿ ಐದು ಲಕ್ಷ ರೂಪಾಯಿ ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತುಗಳ ವ್ಯಾಪಾರ ಮತ್ತು ಸಾಗಾಟ ನಡೆಸುತ್ತಿದ್ದವರ ವಿರುದ್ಧ 37 ಪ್ರಕರಣಗಳನ್ನು ದಾಖಲಿಸಿ 73 ಪೆಡ್ಲರ್ಸ್‌ಗಳನ್ನು ಬಂಧಿಸಲಾಗಿದೆ. ಇವರಲ್ಲಿ 46 ಮಂದಿ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದು, ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ 89 ಕೇಸುಗಳನ್ನು ದಾಖಲಿಸಿ 127 ಮಂದಿಯನ್ನು ವಶಪಡಿಸಿಕೊಂಡು ಅವರ ಮೂಲಕ ಪೆಡ್ಲರ್ಸ್‌ಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.
ಇದೇ ವೇಳೆ ಸಾಮಾಜಿಕ ಜಾಲತಾಣದ ಮೇಲೆ ಪೊಲೀಸರು ತೀವ್ರ ನಿಗಾವಹಿಸಿದ್ದು, ದ್ವೇಷ ಭಾಷಣ, ಅಪಪ್ರಚಾರ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹರಡಿದ 22 ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ನಗರದ ವಿವಿಧ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗುಣಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ವಿಧಿಸಲು ಸಹಕರಿಸಿರುವುದು ಪೊಲೀಸ್ ಇಲಾಖೆಯ ಸಾಧನೆಯನ್ನು ಮತ್ತಷ್ಟು ಬೆಳಗಿಸಿದೆ ಎಂದು ಪೊಲೀಸ್ ಕಮಿಷನರ್ ಹೇಳಿದರು.