ಮಂಗಳೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲುತೂರಾಟದ ಘಟನೆಯ ವಿರುದ್ಧ ಮಂಗಳೂರಿನ ಮಿನಿ ವಿಧಾನಸೌಧದ ಎದುರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು. ಅಲ್ಲದೆ ಪ್ರಕರಣದ ಬಗ್ಗೆ ಸರ್ಕಾರ ನಿರ್ಲಕ್ಯ ವಹಿಸಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.
ಯುವ ವಕೀಲ ಸತೀಶ ಧರ್ಮಸ್ಥಳ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, “ಮದ್ದೂರಿನ ಘಟನೆ ಖಂಡನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಪಿಎಫ್‌ಐ ಮತೀಯ ಅಂಶಗಳಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಸತ್ಯಾಂಶ ಹೊರಬರುವುದು ಎನ್‌ಐಎ ತನಿಖೆಯಿಂದ ಮಾತ್ರ ಸಾಧ್ಯ” ಎಂದು ಹೇಳಿದರು.
ಅವರು ಮುಂದುವರೆದು, “ಧರ್ಮಕ್ಕೆ, ಸಂಸ್ಕೃತಿಗೆ ಅಪಚಾರವಾದರೆ ನಾವು ಮೌನವಾಗಿರುವುದಿಲ್ಲ. ಹಿಂದೂ ಸಮಾಜದ ಮೇಲೆ ಬರುವ ಸವಾಲುಗಳಿಗೆ ಎದೆಯೊಡ್ಡಲು ಸಿದ್ಧರಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ದ.ಕ. ಜಿಲ್ಲಾ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ಶಿವಾನಂದ ಮೆಂಡನ್, ಗೋಪಾಲ್ ಕುತ್ತಾರ್, ಭುಜಂಗ ಕುಲಾಲ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ರವಿ ಅಸೈಗೋಳಿ, ನವೀನ್ ಮೂಡುಶೆಡ್ಡೆ, ದೀಪಕ್ ಮರೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಖ್ಯ ಆಗ್ರಹಗಳು:
-ಮದ್ದೂರು ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವುದು.
-ಗಣೇಶ ವಿಸರ್ಜನೆಯಂತಹ ಹಿಂದೂಗಳ ಹಬ್ಬಗಳಿಗೆ ಅಡ್ಡಿಯಾಗುತ್ತಿರುವ ಪ್ರವೃತ್ತಿಯನ್ನು ತಡೆಯುವುದು.
-ಮತೀಯ ಹಿಂಸಾಚಾರದ ವಿರುದ್ಧ ಕಠಿಣ ಕ್ರಮ.