ಬೆಂಗಳೂರು: ಅತ್ತೆ, ಮಾವ, ಗಂಡನ ವಿರುದ್ಧ ಏನಾದರೊಂದು ಗಂಭೀರ ಆರೋಪ ಮಾಡಿ, ಅವರನ್ನು ಕಟ್ಟಿಹಾಕಲು ನಮ್ಮ ದೇಶದ ಹೆಣ್ಮಕ್ಕಳಿಗೆ ಸುಲಭವಾಗಿ ಸಿಗುವ ಅಸ್ತ್ರವೆಂದರೆ ಅದು ವರದಕ್ಷಿಣೆ ಕೇಸ್ – ಎಂದು ಸೊಸೆ ತಮ್ಮ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಎಸ್. ನಾರಾಯಣ್ ಅವರು ಪ್ರತಿಕ್ರಿಯಿಸಿದ್ದಾರೆ.
ಅವರ ಪುತ್ರ ಪವನ್ ಅವರ ಪತ್ನಿ ಪವಿತ್ರಾ ಅವರು, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಪ್ರಕಾರ, ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಮತ್ತು ಮಗ ಪವನ್ ಅವರು ವರದಕ್ಷಿಣೆಗಾಗಿ ಪೀಡನೆ ನಡೆಸಿದ ಆರೋಪವಿದೆ. ಇದರ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ್ ಅವರು, “ನನ್ನ ಸೊಸೆ ಮನೆ ಬಿಟ್ಟು ಹೋಗಿ ಒಂದು ವರ್ಷವಾಗಿದೆ. ಆಗ ಹಾಕದ ಕೇಸ್ ಈಗ ಯಾಕೆ ಹಾಕಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಇಂದಿನ ಕಾಲದ ಹೆಣ್ಣುಮಕ್ಕಳಿಗೆ ತನ್ನ ಗಂಡ, ಅತ್ತೆ, ಮಾವನನ್ನು ಕಟ್ಟಿ ಹಾಕಲು ಸುಲಭವಾಗಿ ಸಿಗುವ ಅಸ್ತ್ರವೇ ವರದಕ್ಷಿಣೆ. ಅದನ್ನೇ ನಮ್ಮ ಸೊಸೆಯೂ ಬಳಸಿದ್ದಾರೆ” ಎಂದು ಹೇಳಿದ್ದಾರೆ.
“ನಮ್ಮಲ್ಲಿ ಹೆಣ್ಣುಮಕ್ಕಳನ್ನು ಗೌರವಿಸುವ ಸಂಸ್ಕೃತಿ ಇದೆ. ನನ್ನ ಸೊಸೆ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಪವನ್ ಮತ್ತು ಪವಿತ್ರಾ ಪ್ರೀತಿಯಿಂದ ಮದುವೆಯಾದವರು. ಅವರ ಪ್ರೀತಿಗೆ ನಾನು ಅಡ್ಡಿ ಬರಲಿಲ್ಲ. ಆದರೆ, ಸೊಸೆಯಾಗಿ ಬಂದವಳು ನಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು. ಆದರೆ, ಆಕೆ ಹಾಗೆ ನಡೆದುಕೊಳ್ಳಲಿಲ್ಲ. ಅದನ್ನು ತಿಳಿಸಲು ಹೋದಾಗ ಮನೆಯಲ್ಲಿ ಕಿರಿಕಿಗಳಾದವು. ಸಂಬಂಧಗಳಲ್ಲಿ ಬಿರುಕು ಮೂಡಿದವು. ಇಂದಿನ ಯುವಕ- ಯುವತಿಯರು ನಮ್ಮಂಥ ಹಿರಿಯ ಮಾತು ಕೇಳೋದೆ ಇಲ್ಲ ಎಂಬಂಥ ಮನಸ್ಥಿತಿಯಲ್ಲಿದ್ದಾರೆ. ಅವರಿಗೆ ನಾವು ಹೇಳೋದು ಆಗಲ್ಲ. ಸಂಸ್ಕಾರಬದ್ಧವಾಗಿ ಬದುಕು ಎಂದು ಹೇಳಿದ್ದೇ ತಪ್ಪಾಯ್ತು. ನಮ್ಮ ಮನೆಯಲ್ಲಿ ಇರುವುದು ಅವರಿಗೆ ಕಿರಿಕಿರಿ ಎಂದೆನಿಸಿ ಅವರಿಗೆ ಎಲ್ಲಿ ಸುಖ, ನೆಮ್ಮದಿ ಇದೆಯೋ ಅಲ್ಲಿಗೆ ಹೋಗಿ ಇದ್ದಾರಷ್ಟೇ” ಎಂದು ಎಸ್. ನಾರಾಯಣ್ ಹೇಳಿದ್ದಾರೆ.
ನಿರ್ದೇಶಕ ಎಸ್.ನಾರಾಯಣ್ ದಂಪತಿ, ಮಗನ ವಿರುದ್ಧ ವರದಕ್ಷಿಣೆ ಕೇಸ್: ಸೊಸೆ ಪವಿತ್ರಾ ದೂರು !!