ಸೆ.11ರಿಂದ 13: ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಅಮೃತ ಮಹೋತ್ಸವದ ಕಾರ್ಯಕ್ರಮ

ಮಂಗಳೂರು: ಮಂಗಳೂರು ರಾಮಕೃಷ್ಣ ಮಿಷನ್ ತನ್ನ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ಸೆ. 11ರಿಂದ 13ರವರೆಗೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶ್ರದ್ಧಾ–2025, ಮೇಧಾ–2025 ಮತ್ತು ಪ್ರಜ್ಞಾ–2025 ಶೈಕ್ಷಣಿಕ ವಿಚಾರ ಸಂಕಿರಣಗಳು ನಡೆಯಲಿವೆ ಎಂದು ಮಿಶನಿನ ಕಾರ್ಯದರ್ಶಿ ಸ್ವಾಮಿ ಜಿತಕಾಮನಂದಜೀ ಹೇಳಿದರು.

ಅವರು ಮಂಗಳೂರಿನ ರಾಮಕೃಷ್ಣಮ ಮಠದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶ್ರದ್ಧಾ – 2025, ಸೆ. 11, ಬೆಳಗ್ಗೆ 9.30ಕ್ಕೆ ಸೇಂಟ್ ಅಲೋಶಿಯಸ್ ವಿವಿ ಕುಲಪತಿ ಫಾ. ಡಾ. ಪ್ರವೀಣ್ ಮಾರ್ಟಿಸ್ ಅವರಿಂದ ಉದ್ಘಾಟನೆಗೊಳ್ಳಲಿದೆ. ಮೇಧಾ – 2025: ಸೆ. 12, ಬೆಳಗ್ಗೆ 9.30ಕ್ಕೆ ಮೈಸೂರು ಆಶ್ರಮಾಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ ಅವರಿಂದ ಉದ್ಘಾಟನೆಗೊಳ್ಳಲಿದೆ. ಪ್ರಜ್ಞಾ – 2025: ಸೆ. 12, ಬೆಳಗ್ಗೆ 9.30ಕ್ಕೆ ಬೇಲೂರು ಮಠದ ಉಪಾಧ್ಯಕ್ಷ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದರು.

ಸೆ. 14ರಂದು ಅಮೃತ ಮಹೋತ್ಸವದ ಅಂಗವಾಗಿ “ಅಮೃತಭವನ” ಹಾಗೂ ವಿವೇಕಾನಂದ ಅಧ್ಯಯನ ಕೇಂದ್ರದ ಹೊಸ ತರಗತಿ ಕೊಠಡಿಗಳು ಉದ್ಘಾಟನೆಯಾಗಲಿದೆ. ಈ ಕಟ್ಟಡವನ್ನು ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ಬಡ ಮಕ್ಕಳಿಗೆ ಉಚಿತ ಟ್ಯೂಷನ್, ಆಹಾರ, ಬಟ್ಟೆ ಹಾಗೂ ಸಾಂಸ್ಕೃತಿಕ ತರಬೇತಿ ನೀಡಲಾಗುವುದು. ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ, ವೈದ್ಯಕೀಯ ಶಿಬಿರ, ಶಾಸ್ತ್ರೀಯ ಸಂಗೀತ, ಯಕ್ಷಗಾನ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯಲಿವೆ ಎಂದು ಕಾರ್ಯದರ್ಶಿ ಸ್ವಾಮಿ ಜಿತಕಾಮನಂದಜೀ ತಿಳಿಸಿದ್ದಾರೆ.

ಮಾಜಿ ಸೈನಿಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, “ಕಳೆದ ವರ್ಷ 44 ಸಾವಿರ ಕಸ ವಿಂಗಡಿಸಿದ್ದೇವೆ. 1.75 ಲಕ್ಷ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೈವೇ ಬಳಕೆಗೆ ನೀಡಿದ್ದೇವೆ” ಎಂದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವಿನೂತನ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

error: Content is protected !!