ಮಾಸ್ಕೋ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಹೆಜ್ಜೆಯಾಗಿ, ರಷ್ಯಾದ ಫೆಡರಲ್ ಮೆಡಿಕಲ್ ಬಯೋಲಾಜಿಕಲ್ ಏಜೆನ್ಸಿ (FMBA) ಹೊಸ mRNA ಆಧಾರಿತ ಕ್ಯಾನ್ಸರ್ ಲಸಿಕೆ ‘ಎಂಟರೊಮಿಕ್ಸ್’ ಬಳಕೆಗೆ ಸಿದ್ಧವಾಗಿದೆ ಎಂದು ಘೋಷಿಸಿದೆ.
ಈ ಲಸಿಕೆಯನ್ನು ಹಲವು ವರ್ಷಗಳ ಸಂಶೋಧನೆಯ ಬಳಿಕ ಅಭಿವೃದ್ಧಿಪಡಿಸಲಾಗಿದ್ದು, ಮೊದಲು ಕೊಲೊರೆಕ್ಟಲ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಪ್ರಯೋಗದ ಮೊದಲ ಹಂತದಲ್ಲಿ 48 ಸ್ವಯಂಸೇವಕರು ಭಾಗವಹಿಸಿದ್ದು, ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು FMBA ತಿಳಿಸಿದೆ.
FMBA ಮುಖ್ಯಸ್ಥೆ ವೆರೋನಿಕಾ ಸ್ಕ್ವೊರ್ಟ್ಸೊವಾ ಅವರ ಪ್ರಕಾರ, “ಈ ಲಸಿಕೆ ಟ್ಯೂಮರ್‌ಗಳ ಗಾತ್ರವನ್ನು ಕಡಿಮೆ ಮಾಡುವುದರ ಜೊತೆಗೆ ರೋಗಿಗಳ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕರ ಅಂಗಾಂಶಗಳಿಗೆ ಹಾನಿ ಮಾಡದೆ, ಕೇವಲ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸುತ್ತದೆ” ಎಂದು ಹೇಳಿದರು.
ವೈಶಿಷ್ಟ್ಯವೆಂದರೆ, ‘ಎಂಟರೊಮಿಕ್ಸ್’ ಲಸಿಕೆಯನ್ನು ಪ್ರತಿಯೊಬ್ಬ ರೋಗಿಗೆ ವೈಯಕ್ತಿಕವಾಗಿ ನೀಡಬಹುದು. ನಾಲ್ಕು ನಿರುಪದ್ರವಿ ವೈರಸ್‌ಗಳನ್ನು ಆಧಾರವಾಗಿ ಬಳಸಿಕೊಂಡು, ದೇಹದ ರೋಗನಿರೋಧಕ ವ್ಯವಸ್ಥೆಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ತರಬೇತಿ ನೀಡುವ ರೀತಿಯಲ್ಲಿ ಲಸಿಕೆಯನ್ನು ರೂಪಿಸಲಾಗಿದೆ.
ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಇಂತಹ ಲಸಿಕೆಗಳಿಗೆ ತಲೆತಿರುಗುವಿಕೆ, ಜ್ವರ, ಶೀತ, ತಲೆನೋವು, ಆಯಾಸ, ವಾಕರಿಕೆ, ಕೀಲು ನೋವು ಮುಂತಾದ ಅಡ್ಡಪರಿಣಾಮಗಳ ಸಾಧ್ಯತೆ ಇರುತ್ತದೆ.
FMBA ಪ್ರಕಾರ, ಮುಂದಿನ ಹಂತದಲ್ಲಿ ಗ್ಲಿಯೋಬ್ಲಾಸ್ಟೊಮಾ (ಮೆದಳು ಕ್ಯಾನ್ಸರ್) ಮತ್ತು ಮೆಲನೋಮಾ (ಚರ್ಮ ಕ್ಯಾನ್ಸರ್) ಸೇರಿದಂತೆ ಹಲವಾರು ಪ್ರಭೇದಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲು ಯೋಜಿಸಲಾಗಿದೆ.
ಪ್ರಪಂಚದಾದ್ಯಂತ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಹಲವಾರು ರೀತಿಯ ಚಿಕಿತ್ಸಾ ವಿಧಾನಗಳು ಅಸ್ತಿತ್ವದಲ್ಲಿದ್ದರೂ, ಲಸಿಕೆ ಆಧಾರಿತ ಚಿಕಿತ್ಸೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ, ರಷ್ಯಾದ ಹೊಸ ಪ್ರಯತ್ನ ವಿಶ್ವದ ಗಮನ ಸೆಳೆಯುವುದು ಸಹಜ. ವೈದ್ಯಕೀಯ ವಲಯದಲ್ಲಿ, “ಎಂಟರೊಮಿಕ್ಸ್ ಯಶಸ್ವಿಯಾದರೆ, ಅದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಅಧ್ಯಾಯ ಬರೆಯಬಹುದು” ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.