ಕಾಸರಗೋಡು: ವ್ಯಕ್ತಿಯೋರ್ವ ತನ್ನ ಪರಿತ್ಯಕ್ತ ಪತ್ನಿ, ಮಗಳು ಹಾಗೂ ಸೊಸೆಯ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಕಾಸರಗೋಡು ಜಿಲ್ಲೆಯ ಪಣತ್ತಡಿ ಪಂಚಾಯತ್‌ನ ಪರಕಡವ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಕೊಡಗಿನ ಕರಿಕೆ ಪಂಚಾಯತ್‌ನ ಅನಪ್ಪಾರದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಮನೋಜ್ ಕೆ.ಸಿ (48) ಪ್ರಕರಣದ ಆರೋಪಿಯಾಗಿದ್ದಾನೆ.
ಮನೋಜ್ ಪತ್ನಿ ದಿವ್ಯಾ ಗಾಯಗೊಂಡಿದ್ದು ಇವರಿಬ್ಬರ ಪುತ್ರಿ ನಿನ್ನು ಮೋಲ್ ಕೆ.ಎಂ.(17) ಕೈಗಳು ಮತ್ತು ತೊಡೆಗಳ ಮೇಲೆ ಸುಟ್ಟ ಗಾಯಗಳಾಗಿದೆ. ಅದೇ ರೀತಿ ದಿವ್ಯಾ ಸಹೋದರ ಮೋಹನನ್ ಅವರ ಪುತ್ರಿ ಮಾನ್ಯ ಎಂ.(10) ಅವರ ಮುಖ ಮತ್ತು ತೋಳುಗಳ ಮೇಲೆ ಸುಟ್ಟ ಗಾಯಗಳಾಗಿವೆ.
ಆರೋಪಿ ತನ್ನ ಪತ್ನಿ ಮಗುವನ್ನು ಬಿಟ್ಟು ಸಹೋದರನೊಂದಿಗೆ ವಾಸಿಸುತ್ತಿದ್ದು, ಕುಡಿತದ ಚಟ ಹೊಂದಿದ್ದ. ಈತ ಹಿಂದಿನಿಂದಲೂ ಇದೇ ರೀತಿ ಕಿರಿಕ್ ಮಾಡಿಕೊಂಡಿರುತ್ತಿದ್ದ ಎಂದು ತಿಳಿದುಬಂದಿದೆ. ಬೆಳಿಗ್ಗೆ 5 ಗಂಟೆಗೆ ಮನೋಜ್ ಮೊದಲು ಪೆಟ್ರೋಲ್ ಸುರಿದು ದಿವ್ಯಾ ಅವರ ಸ್ಕೂಟರ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಕುಟುಂಬದ ಎಚ್ಚರಿಕೆಯಿಂದ ಆತನ ಪ್ರಯತ್ನ ವಿಫಲವಾಗಿತ್ತು. ಬೆಳಿಗ್ಗೆ 10.30ಕ್ಕೆ ಆಸಿಡ್ ತೆಗೆದುಕೊಂಡು ಮತ್ತೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆಸಿಡ್ ಬೀಳುತ್ತಿದ್ದಂತೆ ಅಜ್ಜಿ ದಿವ್ಯಾ ಅವರ ತೋಳುಗಳನ್ನು ನೀರಿನಿಂದ ತೊಳೆದು ಆಳವಾದ ಗಾಯವಾಗದಂತೆ ನೋಡಿಕೊಂಡರು.
ಮನೋಜ್ ಮತ್ತು ದಿವ್ಯಾ ಬೇರೆ ಬೇರೆ ಧರ್ಮದವರಾಗಿದ್ದು, ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಆದರೆ ಮನೋಜ್ ಹಲ್ಲೆ ಮತ್ತು ದೌರ್ಜನ್ಯ ನಡೆಸುತ್ತಿದ್ದುದರಿಂದ ದಿವ್ಯಾ ತನ್ನ ಸಹೋದರ ಮೋಹನನ್ ಜೊತೆ ವಾಸಿಸುತ್ತಿದ್ದಳು. ಮನೋಜ್ ಅಲ್ಲಿಗೆ ತೆರಳಿ ಕೃತ್ಯ ಎಸಗಿದ್ದಾನೆ.
ಆರೋಪಿಯ ವಿರುದ್ಧ ರಾಜಪುರಂ ಪೊಲೀಸರು ಮನೋಜ್ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮನೆಗೆ ಅತಿಕ್ರಮಿಸಿದ್ದಕ್ಕಾಗಿ ಸೆಕ್ಷನ್ 329(3) ಪ್ರಕರಣ ದಾಖಲಿಸಿದ್ದಾರೆ.
ಅದರೊಂದಿಗೆ ಆಸಿಡ್ ಬಳಸಿ ಗಾಯಗೊಳಿಸುವುದು ಸೆಕ್ಷನ್ 124(1), ಕೊಲೆ ಯತ್ನ [ಸೆಕ್ಷನ್ 109(1), ಕ್ರಿಮಿನಲ್ ಬೆದರಿಕೆ [ಸೆಕ್ಷನ್ 351(2) ಪ್ರಕರಣವೂ ದಾಖಲಾಗಿದೆ. ಅಪರಾಧ ಸಾಬೀತಾದರೆ, ಮನೋಜ್ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.