ಕುಂದಾಪುರ: ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಮುತ್ತು ಕೊಟ್ಟಿದ್ದ ಆರೋಪಿಯ ವಿರುದ್ಧ ಪ್ರಕರಣ ಕುಂದಾಪುರ ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ರಟ್ಟಾಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮುಖ್ಯಸ್ಥ ನವೀನಚಂದ್ರ ಶೆಟ್ಟಿ ರಟ್ಟಾಡಿ ಪ್ರಕರಣದ ಆರೋಪಿ.
ದೂರುದಾರೆಯ ಪ್ರಕಾರ, ಯುವತಿ ಧರ್ಮಸ್ಥಳದ ಧರ್ಮ ಸಂರಕ್ಷಣಾ ಯಾತ್ರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲು ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಣಿಮಕ್ಕಿಯ ಮನೆಗೆ ತೆರಳಿದ್ದಳು. ದೇವಸ್ಥಾನವೊಂದರ ವ್ಯವಸ್ಥಾಪನ ಸಮಿತಿ ಮುಖ್ಯಸ್ಥ ನವೀನಚಂದ್ರ ಶೆಟ್ಟಿ ರಟ್ಟಾಡಿ ಆಹ್ವಾನ ಪತ್ರಿಕೆ ಪಡೆಯುವ ವೇಳೆ ಯುವತಿಯ ಕೈಯನ್ನು ಸ್ಪರ್ಶಿಸಿದ್ದು, ಇದರಿಂದ ಆಕೆಗೆ ಮುಜುಗರ ಉಂಟಾಗಿದೆ.
ಆನಂತರ ಹೊರಡಲು ಯತ್ನಿಸಿದ ಯುವತಿಯನ್ನು “ಇನ್ನೂ ಎರಡು ನಿಮಿಷ ನಿಲ್ಲಿ” ಎಂದು ಒತ್ತಾಯಿಸಿ, ಹತ್ತಿರಕ್ಕೆ ಎಳೆದುಕೊಂಡು ಆಕೆಯ ಎಡ ಕೆನ್ನೆಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಆಘಾತಗೊಂಡ ಆಕೆ ತಕ್ಷಣ ಅಲ್ಲಿಂದ ಹೊರಟರೂ, ಆರೋಪಿ ಮನೆ ಬಾಗಿಲುವರೆಗೂ ಹಿಂಬಾಲಿಸಿಕೊಂಡು ಬಂದು ಮತ್ತೆ ಮನೆಗೆ ಬರಬೇಕೆಂದು ಒತ್ತಾಯಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅಮಾಸೆಬೈಲು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2025, ಕಲಂ 75, BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಗತಿಯಲ್ಲಿದೆ.