ಜಿಎಸ್‌ಟಿ ಕ್ರಾಂತಿ: ಮುಂದಿನ ಪೀಳಿಗೆಯ ಜಿಎಸ್‌ಟಿಯಲ್ಲಿ ಭರಪೂರ ಸುಧಾರಣೆ: ಬದುಕು ಸುಲಭ, ಖರ್ಚು ಕಡಿಮೆ – ರೈತರಿಂದ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ನೆಮ್ಮದಿ

ನವದೆಹಲಿ: ಕೇಂದ್ರ ಸರ್ಕಾರ ಪ್ರಕಟಿಸಿರುವ Next-Gen GST Reform(ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆ) ದೇಶದ ಸಾಮಾನ್ಯ ಜನತೆ, ರೈತರು, ವಿದ್ಯಾರ್ಥಿಗಳು, ಆರೋಗ್ಯ ಹಾಗೂ ಕೈಗಾರಿಕಾ ವಲಯದಲ್ಲಿ ಕ್ರಾಂತಿ ಎಬ್ಬಿಸಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ, ಆರೋಗ್ಯ ಸೇವೆ ಅಗ್ಗ, ಶಿಕ್ಷಣ ಸಾಮಗ್ರಿ ಉಚಿತ, ವಾಹನ–ಉಪಕರಣಗಳ ಮೇಲೆ ಕಡಿಮೆ ತೆರಿಗೆ – ಈ ಎಲ್ಲವೂ ಜನಜೀವನಕ್ಕೆ ಹಿತಕರ ಬದಲಾವಣೆ ತರಲಿವೆ ಎಂಬ ನಿರೀಕ್ಷೆ ಹೊಂದಲಾಗಿದೆ.


ದಿನನಿತ್ಯದ ಅವಶ್ಯಕ ವಸ್ತುಗಳು ಅಗ್ಗ

ಹೇರ್‌ ಆಯಿಲ್, ಶಾಂಪೂ, ಪೇಸ್ಟ್, ಸಾಬೂನು, ಶೇವಿಂಗ್ ಕ್ರೀಮ್‌ಗಳಿಗೆ ವಿಧಿಸಲಾಗುತ್ತಿದ್ದ 18% ತೆರಿಗೆ ಕೇವಲ 5%ಕ್ಕೆ ಇಳಿಸಲಾಗಿದೆ. ಬೆಣ್ಣೆ, ತುಪ್ಪ, ಚೀಸ್, ಶಿಶುಗಳ ಉತ್ಪನ್ನಗಳು, ಡಯಪರ್‌ಗಳ ಮೇಲಿನ ತೆರಿಗೆಯೂ 12ರಿಂದ 5%ಕ್ಕೆ ಇಳಿಕೆಯಾಗಿದೆ.

ರೈತರಿಗೆ ಹೊಸ ಬೆಳಕು

ಟ್ರಾಕ್ಟರ್ ಮತ್ತು ಟೈರ್‌ಗಳ ತೆರಿಗೆ 18ರಿಂದ 5%ಕ್ಕೆ ಇಳಿಕೆಯಾಗಿದೆ. ಬಯೋ-ಪೆಸ್ಟಿಸೈಡ್ಸ್, ಮೈಕ್ರೋ ನ್ಯೂಟ್ರಿಯಂಟ್ಸ್, ಡ್ರಿಪ್ ಇರಿಗೇಶನ್ ವ್ಯವಸ್ಥೆ, ಸ್ಪ್ರಿಂಕ್ಲರ್‌ಗಳ ಮೇಲಿನ ತೆರಿಗೆ ಕೇವಲ 5%ಕ್ಕೆ ಇಳಿದಿರುವುದರಿಂದ ಉತ್ಪಾದನಾ ವೆಚ್ಚ ಕಡಿಮೆ, ಫಲ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ

ಕೈಗೆಟುಕುವ ದರಯಲ್ಲಿ ಆರೋಗ್ಯ ಸೇವೆ

ವೈಯಕ್ತಿಕ ಆರೋಗ್ಯ ಹಾಗೂ ಜೀವನ ವಿಮೆಗೆ ವಿಧಿಸಲಾಗುತ್ತಿದ್ದ 18% ತೆರಿಗೆ ಸಂಪೂರ್ಣ ರದ್ದಾಗಿದೆ. ಥರ್ಮೋಮೀಟರ್, ಮೆಡಿಕಲ್ ಆಕ್ಸಿಜನ್, ಡಯಾಗ್ನೊಸ್ಟಿಕ್ ಕಿಟ್‌ಗಳು, ಗ್ಲೂಕೋಮೀಟರ್, ಕನ್ನಡಕಗಳ ತೆರಿಗೆಯನ್ನು 12ರಿಂದ 5%ಕ್ಕೆ ಇಳಿಕೆ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಗಿಫ್ಟ್

ಪೆನ್, ಪೆನ್ಸಿಲ್, ನೋಟು ಪುಸ್ತಕ, ಇರೇಸರ್‌(ರಬ್ಬರ್)ಗಳ ತೆರಿಗೆ ಸಂಪೂರ್ಣ ತೆಗೆದುಹಾಕಲಾಗಿದೆ. ಅಧ್ಯಯನ ಸಾಮಗ್ರಿಗಳು ಈಗ ಮಕ್ಕಳಿಗೆ ಅಗ್ಗದ ಬೆಲೆಗೆ ಸಿಗಲಿದ್ದು, ಕೆಲವಕ್ಕೆ ಶೂನ್ಯ ತೆರಿಗೆ ವಿಧಿಸಲಾಗಿದೆ

ವಾಹನಗಳ ಮೇಲೆ ಭರಪೂರ ಜಿಎಸ್‌ಟಿ ಸಡಿಲಿಕೆ

ಪೆಟ್ರೋಲ್–ಡೀಸೆಲ್ ಹೈಬ್ರಿಡ್ ಕಾರುಗಳು, ಎಲ್‌ಪಿಜಿ, ಸಿಎನ್‌ಜಿ ಕಾರುಗಳು, 3 ಚಕ್ರದ ವಾಹನಗಳು ಹಾಗೂ 350 ಸಿಸಿ ಒಳಗಿನ ಬೈಕ್‌ಗಳಿಗೆ ತೆರಿಗೆ 28ರಿಂದ 18%ಕ್ಕೆ ಇಳಿಕೆ‌ ಮಾಡಲಾಗಿದೆ. ಏರ್‌ ಕಂಡೀಷನರ್, ಮಾನಿಟರ್, ಪ್ರಾಜೆಕ್ಟರ್, ಡಿಶ್‌ವಾಷಿಂಗ್ ಯಂತ್ರಗಳ ಮೇಲೂ ಇದೇ ರೀತಿಯ ಕಡಿತ ಮಾಡಲಾಗಿದೆ.

ಪ್ರಕ್ರಿಯೆಗಳು ಇನ್ನಷ್ಟು ಸುಲಭ

ಜಿಎಸ್‌ಟಿ ನೋಂದಣಿ ಕೇವಲ 3 ದಿನಗಳಲ್ಲಿ ಸ್ವಯಂಚಾಲಿತವಾಗಿ ಆಗಲಿದೆ. ಮಾಸಿಕ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ₹2.5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಮರುಪಾವತಿ (Refund) ಪ್ರಕ್ರಿಯೆಯೂ ಸರಳಗೊಳಿಸಲಾಗಿದೆ.

ಈ ಸುಧಾರಣೆಗಳಿಂದ “ಆತ್ಮನಿರ್ಭರ ಭಾರತ”ದ ಕನಸು ಸಾಮಾನ್ಯರ ಬದುಕಿನ ಹಾದಿಯಲ್ಲಿ ನೈಜ ಅನುಭವವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.

error: Content is protected !!