ಮಂಗಳೂರು: ಬ್ರಹ್ಮಕುಮಾರೀಸ್ ಮಂಗಳೂರು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಉರ್ವಸ್ಟೋರ್, ಮಂಗಳೂರಿನ ಬ್ರಹ್ಮಕುಮಾರೀಸ್ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ 10:00ರಿಂದ ಮಧ್ಯಾಹ್ನ 4:00ರವರೆಗೆ ನಡೆದ ಈ ಶಿಬಿರದಲ್ಲಿ ವಿವಿಧ ವಲಯಗಳಿಂದ ಬಂದ ದಾನಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮವನ್ನು ಪ್ರಮುಖ ಅತಿಥಿಗಳಾದ CA ಶಾಂತರಾಮ್ ಶೆಟ್ಟಿ, ಅಧ್ಯಕ್ಷರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ; ಫಾದರ್ ಮ್ಯಾಕ್ನಝಿ ಮೆಂಡೊಂಝಾ, ಸಹಾಯಕ ಪ್ಯಾರಿಶ್ ಪಾದ್ರಿ, ಸೇಂಟ್ ಡೊಮಿನಿಕ್ ಚರ್ಚ್; ಹಾಗೂ ಶ್ರೀ ಸುಬ್ಬ ಕರಡ್ಕ, ಮ್ಯಾನೇಜರ್, ಆದಿಚುಂಚನಗಿರಿ ಮಠ, ಗಾಂಧಿನಗರ, ಕಾವೂರು ಇವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಬಿ.ಕೆ. ವಿಶ್ವೇಶ್ವರಿ, ಕೇಂದ್ರಪ್ರಮುಖರು, ಬ್ರಹ್ಮಕುಮಾರೀಸ್, ಮಂಗಳೂರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಅವರು ಮಾತನಾಡುತ್ತಾ “ರಕ್ತದಾನವೆಂಬುದು ಮಾನವೀಯ ಸೇವೆಯ ಅತ್ಯುನ್ನತ ಕರ್ಮ. ಇದು ಜೀವ ಉಳಿಸುವುದಲ್ಲದೆ, ಮಾನವೀಯತೆ, ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಹರಡುವುದಾಗಿದೆ” ಎಂದು ಹೇಳಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ವೈದ್ಯಕೀಯ ಸಿಬ್ಬಂದಿಗಳು ಶಿಸ್ತುಬದ್ಧ ಹಾಗೂ ಸ್ವಚ್ಛತೆಯ ನಿಯಮಗಳನ್ನು ಪಾಲಿಸಿ ರಕ್ತ ಸಂಗ್ರಹ ಕಾರ್ಯ ನಡೆಸಿದರು. ಅನೇಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಿದರು.
ಅತಿಥಿಗಳು ಮಾತನಾಡಿ, “ಸಮಾಜದ ಹಿತಕ್ಕಾಗಿ, ಜನರಲ್ಲಿ ಸೇವಾಭಾವನೆ ಬೆಳೆಸುವಂತಹ ಮಾನವೀಯ ಕಾರ್ಯಗಳನ್ನು ಬ್ರಹ್ಮಕುಮಾರೀಸ್ ಸಂಸ್ಥೆ ಸದಾ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು. ಬಿ ಕೆ ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು, ಆಪ್ತ ಸಮೋಲೋಚಕಿ ರೇವತಿ ಸನಿಲ್ ಸ್ವಾಗತಿಸಿದರು.
ಶಿಬಿರದಲ್ಲಿ ಭಾಗವಹಿಸಿದ ದಾನಿಗಳಿಗೆ ಆಹಾರ ಪಾನೀಯಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.