ಕೈವ್: ಬಲಾಢ್ಯ ರಷ್ಯಾದೊಂದಿಗೆ ಕಾದಾಟಕ್ಕಿಳಿದು ತನ್ನದೇ ದೇಶದ ಭವಿಷ್ಯದ ಮೇಲೆ ಕಲ್ಲು ಹಾಕಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿರುದ್ಧ ಅಲ್ಲಿನ ಜನತೆ ತಿರುಗಿ ಬಿದ್ದಿದ್ದಾರೆ. ನೀನೊಬ್ಬ ಹುಚ್ಚ, ಜೋಕರ್, ನರರಾಕ್ಷಸ, ಸರ್ವಾಧಿಕಾರಿ ಎಂದೆಲ್ಲಾ ಕರೆದಿದ್ದಾರೆ.
ಉಕ್ರೇನ್‌ನಲ್ಲಿ ಝೆಲೆನ್ಸ್ಕಿ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ಅದು ತೀವ್ರ ಸ್ವರೂಪ ಪಡೆಯುತ್ತಿದೆ. ಝೆಲೆನ್ಸ್ಕಿ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾ ಜನರು ಕೈವ್ ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದಾರೆ. ಈ ಪ್ರತಿಭಟನೆಗಳಿಗೆ ಕಾರಣ ಸಾರ್ವಜನಿಕರನ್ನು ಕೆರಳಿಸಿದ ಉಕ್ರೇನ್‌ನಲ್ಲಿನ ವಿವಾದಾತ್ಮಕ ಹೊಸ ಕಾನೂನು!
ಯಾಕಾಗಿ ಪ್ರತಿಭಟನೆ?
ಉಕ್ರೇನ್‌ನ ಸಂಸತ್ತು ಇತ್ತೀಚೆಗೆ ಹೊಸ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಅಂಗೀಕರಿಸಿದೆ. ಈ ಕಾನೂನು ಉಕ್ರೇನ್‌ನ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಬ್ಯೂರೋ (NABU) ಮತ್ತು ವಿಶೇಷ ಭ್ರಷ್ಟಾಚಾರ ವಿರೋಧಿ ಪ್ರಾಸಿಕ್ಯೂಟರ್ ಕಚೇರಿ (SAPO) ನಂತಹ ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳ ಮೇಲೆ ಸರ್ಕಾರ ತನ್ನ ಮೇಲ್ವಿಚಾರಣೆಯನ್ನು ಹೆಚ್ಚಿಸುತ್ತದೆ. ಸದ್ಯ ಈ ಕಾನೂನು ಪ್ರತಿಭಟನೆಗಳ ವಿಷಯವಾಗಿದೆ. ಇದು ಈ ಸಂಸ್ಥೆಗಳ ಸ್ವಾತಂತ್ರ್ಯವನ್ನು ಹಾಳು ಮಾಡುತ್ತದೆ ಮತ್ತು ಝೆಲೆನ್ಸ್ಕಿ ತನ್ನ ಸಹಚರರನ್ನು ಭ್ರಷ್ಟಾಚಾರ ತನಿಖೆಗಳಿಂದ ರಕ್ಷಿಸಲು ಈ ಕಾನೂನನ್ನು ಬಳಸುತ್ತಿದ್ದಾರೆ ಎಂದು ಜನರು ಆರೋಪಿಸುತ್ತಾರೆ.
ಹೊಸ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಪ್ರತಿಭಟಿಸಲು ಹಲವಾರು ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಝೆಲೆನ್ಸ್ಕಿ ಕಾನೂನನ್ನು ವೀಟೋ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಗಳ ಸಮಯದಲ್ಲಿ, ಜನರು ಝೆಲೆನ್ಸ್ಕಿಯನ್ನು ಸರ್ವಾಧಿಕಾರಿ ಮತ್ತು ರಾಕ್ಷಸ ಎಂದು ಉಲ್ಲೇಖಿಸುತ್ತಿದ್ದಾರೆ. ಹೊಸ ಕಾನೂನು ದೇಶಾದ್ಯಂತ ಝೆಲೆನ್ಸ್ಕಿ ಬಗ್ಗೆ ಸಾರ್ವಜನಿಕ ಅಸಮಾಧಾನ ಹೆಚ್ಚಿಸಿದೆ.