ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆಯ ಪ್ರಮುಖ ಸರ್ಕಲ್‌ನಲ್ಲಿ ಜು. 19ರ ಮುಂಜಾನೆ ಬೀದಿ ಬದಿಯಲ್ಲಿ ಮಲಗಿದ್ದ ದನವೊಂದನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ತುರುಕಿ ಸಾಗಿಸಿದ ಇಬ್ಬರು ಆರೋಪಿಗಳನ್ನು ಬಜ್ಪೆ ಸಮೀಪದ ಗಂಜಿಮಠದಲ್ಲಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೇಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಕುಟ್ಟು ಹಾಗೂ ಇರ್ಷಾದ್ ಬಂಧಿತರು. ಇನ್ನೋರ್ವನಿಗಾಗಿ ಶೋಧ ನಡೆಯುತ್ತಿದೆ.
ಶನಿವಾರ ಮುಂಜಾನೆ 3.30ರ ಸುಮಾರಿಗೆ ಹುಣ್ಸೆಮಕ್ಕಿ ಕಡೆಯಿಂದ ಸ್ಕಾರ್ಪಿಯೋ ವಾಹನದಲ್ಲಿ ಬಂದ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡಿದ್ದ ಮೂವರು ದನಕಳ್ಳರು ಬೀದಿ ಬದಿ ಮಲಗಿದ್ದ ದನದ ಕುತ್ತಿಗೆಗೆ ಹಗ್ಗ ಬಿಗಿದು ಎಳೆದೊಯ್ದು ಸ್ಕಾರ್ಪಿಯೋ ವಾಹನದ ಡಿಕ್ಕಿಗೆ ತುಂಬುತ್ತಿರುವ ಮತ್ತು ಶಿರಿಯಾರ ಕಡೆಗೆ ಸಾಗಿರುವ ದೃಶ್ಯವು ಅಲ್ಲಿನ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜಯಪ್ರಕಾಶ್ ಶೆಟ್ಟಿ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ಮತ್ತು ಸಿಬ್ಬಂದಿ ಶ್ರೀಧರ್, ರಾಘವೇಂದ್ರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಗಂಜಿಮಠದಲ್ಲಿ ಪತ್ತೆಹಚ್ಚಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಇಮ್ರಾನ್ ಕುಟ್ಟುವಿನ ಮೇಲೆ ಉಡುಪಿ ಜಿಲ್ಲೆಯ ಈ ಪ್ರಕರಣವನ್ನು ಸೇರಿದಂತೆ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿವೆ.