ಮಣೇಲ್:‌ ಮತ್ತೆ ಕುಸಿದ ಗೋಕಲ್ಲ್ ಗುಡ್ಡೆ- ಸಂಪೂರ್ಣ ಕುಸಿಯುವ ಭೀತಿ

ಮಂಗಳೂರು: ಗಂಜಿಮಠ ಪಂಚಾಯತ್‌ ವ್ಯಾಪ್ತಿಯ ಮಣೇಲ್(ಮಳಲಿ)ಯ ಗೋಕಲ್ಲ್‌(ಗೋಗಲ್ಲು) ರಸ್ತೆಯ ಪಕ್ಕದ ಗುಡ್ಡೆ ಜರಿದು ರಸ್ತೆಗೆ ಬಿದ್ದ ಪರಿಣಾಮ ಉಲ್ಲಾಸ್‌ ನಗರ, ಕಕ್ಕೂರಿಗೆ ಹೋಗುವ ರಸ್ತೆ ಬಂದ್‌ ಆಗಿ ಸಂಚಾರ ಸ್ಥಗಿತಗೊಂಡಿದೆ. ಈ ಬಾರಿ ಗುಡ್ಡ ಸಂಪೂರ್ಣ ಕುಸಿಯುವ ಭೀತಿ ಉಂಟಾಗಿದೆ.

ಅಲ್ಲದೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ಒಸರ್‌ ಪಲ್ಲ, ಚೆನ್ನರಪಾದೆ ರಸ್ತೆಗೆ ಮರ ಬಿದ್ದು ವಿದ್ಯುತ್‌ ತಂತಿಗೆ ಹಾನಿಯಾಗಿದೆ. ಇಲ್ಲಿನ ಮರ ತೆರವು ಕಾರ್ಯ ಆರಂಭಗೊಂಡಿದ್ದು, ರಸ್ತೆಯನ್ನು ಜೆಸಿಬಿ ಮುಖೇನ ಸರಿಪಡಿಸುವ ಕಾರ್ಯ ಸಾಗುತ್ತಿದೆ. ಕುಸಿದಿರುವ ಗುಡ್ಡದ ತೆರವು ಕಾರ್ಯ ಆಗುವವರೆಗೆ ಉಲ್ಲಾಸ ನಗರ ಆಸುಪಾಸಿನ ನಾಗರಿಕರು ಕುಕ್ಕುರಿ ಗಂಜಿಮಠ ರಸ್ತೆಯನ್ನು ಬಳಸುವಂತೆ ಸ್ಥಳೀಯ ಪಂಚಾಯತ್‌  ಸೂಚಿಸಿದೆ.

ಗೋಗಲ್ಲು (ಗೋಕಲ್ಲ್) ಗುಡ್ಡೆ ಕಳೆದ ವರ್ಷದಿಂದ ಜರಿಯುತ್ತಿದ್ದು, ಕಳೆದ ಬಾರಿ ಸುಮಾರು ಮೂರು ಬಾರಿ ಕುಸಿದು ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಅಬ್ಬರದ ಮಳೆಗೆ ಎರಡು ಬಾರಿ ಕುಸಿದು ರಸ್ತೆ ತಡೆ ಉಂಟಾಗಿತ್ತು. ಪ್ರತೀ ಬಾರಿಯೂ ಕುಸಿದಾಗಲೂ ಮಣ್ಣು ತೆರವು ಮಾಡಿ ರಸ್ತೆಗೆ ಸಂಚಾರ ಕಲ್ಪಿಸಲಾಗುತ್ತಿತ್ತು.

ಆದರೆ ಇಂದಿನ ಆಟಿಯ ಮಳೆಗೆ ಗುಡ್ಡ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಮರಗಳೂ ಕೂಡ ಬುಡ ಸಮೇತ ಉರುಳಿ ಬಿದ್ದಿದೆ. ಅಲ್ಲದೆ ಗುಡ್ಡ ಸಂಪೂರ್ಣ ಕುಸಿಯುವ ಹಂತ ತಲುಪಿದ್ದು, ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ಗುಡ್ಡದ ಬುಡದ ಮಣ್ಣು ಸಡಿಲಗೊಂಡಿದ್ದು, ಸಂಪೂರ್ಣ ಕುಸಿಯುವ ಭೀತಿ ಉಂಟಾಗಿದೆ.

ಸ್ಥಳೀಯ ಪಂಚಾಯತ್‌ ಸದಸ್ಯರಾದ ಪ್ರವೀಣ್‌ ಶೆಟ್ಟಿ, ತಮ್ಮಯ್ಯ ಪೂಜಾರಿ, ಸ್ಥಳೀಯ ಯುವಕರು ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗೋಕಲ್ಲು ಗುಡ್ಡೆಯಿಂದ ರಸ್ತೆಗೆ ಬಿದ್ದ ಮಣ್ಣು, ಮರ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

 

error: Content is protected !!