ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್‌ನಲ್ಲಿ ಮಹಿಳಾ ಮಣಿಗಳು! ನಿರ್ಮಲಾ, ಪುರಂದರೇಶ್ವರಿ, ವನತಿ ರೇಸ್‌ನಲ್ಲಿ!

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಯರನ್ನು ನೇಮಿಸುವ ಸಾಧ್ಯತೆ ಇದ್ದು, ಪ್ರಸ್ತುತ ನಿರ್ಮಲಾ ಸೀತಾರಾಮನ್, ಡಿ. ಪುರಂದೇಶ್ವರಿ ಹಾಗೂ ವನತಿ ಶ್ರೀನಿವಾಸನ್ ರೇಸ್‌ನಲ್ಲಿದ್ದಾರೆ.

ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಳೀಯ ಘಟಕಗಳಿಗೆ ಪಕ್ಷದ ಮುಖ್ಯಸ್ಥರನ್ನು ನೇಮಿಸಿದ ನಂತರ, ಬಿಜೆಪಿ ಈಗ ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸುವತ್ತ ಗಮನ ಹರಿಸುತ್ತಿದೆ. ಜೆ.ಪಿ ನಡ್ಡಾ 2020ರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಅವರ ಅವಧಿ 2023ರಲ್ಲಿ ಕೊನೆಗೊಂಡಿದೆ. ಆದರೆ ಲೋಕಸಭಾ ಚುನಾವಣೆಯ ಮೂಲಕ ಪಕ್ಷವನ್ನು ಮುನ್ನಡೆಸಲು ಅವರ ಅಧಿಕಾರಾವಧಿಯನ್ನು ಬಿಜೆಪಿ 2024ರವರೆಗೆ ವಿಸ್ತರಿಸಿದ್ದು, ಸದ್ಯಕ್ಕೆ ಜೆ.ಪಿ. ನಡ್ಡಾ ಅವರೇ ಮುಂದುವರಿದಿದ್ದಾರೆ. 2023ರಲ್ಲಿ ಬಿಜೆಪಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಸಿಕ್ಕಿತು. ಈ ಮಸೂದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಕೋರುತ್ತದೆ.

ಮುಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ಎಂಬ ಕುತೂಹಲವಿದ್ದು, ಈ ಬಾರಿ ಬಿಜೆಪಿ ಮೊದಲ ಮಹಿಳಾ ಅಧ್ಯಕ್ಷರನ್ನು ನೇಮಿಸಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ರೇಸ್‌ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಡಿ. ಪುರಂದೇಶ್ವರಿ ಮತ್ತು ವನತಿ ಶ್ರೀನಿವಾಸನ್ ಅವರಂತಹ ಮಹಿಳಾ ನಾಯಕರು ರೇಸ್​​ನಲ್ಲಿದ್ದಾರೆ. ಮಹಿಳಾ ನಾಯಕತ್ವಕ್ಕೆ ಮಣೆ ಹಾಕುವುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಅನುಮೋದಿಸಿರುವುದರಿಂದ ಈ ಬಾರಿ ಬಿಜೆಪಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ರಾಷ್ಟ್ರೀಯ ಅಧ್ಯಕ್ಷೆಯಾಗಿ ನೇಮಿಸುವ ಸಾಧ್ಯತೆಯಿದೆ.

ನಿರ್ಮಲಾ ಸೀತಾರಾಮನ್:
ಬಿಜೆಪಿ ರಾಷ್ಟ್ರಾಧ್ಯಕ್ಷ ಹುದ್ದೆಯ ರೇಸ್​​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವ್ಯಾಪಕ ಅನುಭವ ಮತ್ತು ನಾಯಕತ್ವದ ಸಾಮರ್ಥ್ಯದಿಂದಾಗಿ ಅವರೇ ಬಿಜೆಪಿ ಮುಖ್ಯಸ್ಥರಾಗುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರದಲ್ಲಿ ಹಿರಿಯ ನಾಯಕಿಯಾಗಿರುವ ನಿರ್ಮಲಾ ಸೀತಾರಾಮನ್ ಈ ಹಿಂದೆ ರಕ್ಷಣಾ ಸಚಿವರಾಗಿದ್ದು, ಬಿಜೆಪಿಯಲ್ಲಿ ದೊಡ್ಡ ಪ್ರಭಾವವನ್ನು ಹೊಂದಿದ್ದಾರೆ.

ಡಿ. ಪುರಂದೇಶ್ವರಿ
ಬಿಜೆಪಿಯ ಆಂಧ್ರಪ್ರದೇಶ ರಾಜ್ಯಾಧ್ಯಕ್ಷೆ ಡಿ. ಪುರಂದೇಶ್ವರಿ ಬಹುಭಾಷಾ ನಾಯಕಿಯೂ ಹೌದು. ವಿವಿಧ ದೇಶಗಳಿಗೆ ಬಹುಪಕ್ಷಗಳ ನಿಯೋಗವಾದ “ಆಪರೇಷನ್ ಸಿಂಧೂರ್” ನಿಯೋಗಕ್ಕೆ ಆಯ್ಕೆ ಮಾಡಲಾಗಿತ್ತು. ಅವರು ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಯುರೋಪಿಯನ್ ಒಕ್ಕೂಟ, ಇಟಲಿ ಮತ್ತು ಡೆನ್ಮಾರ್ಕ್‌ನಲ್ಲಿ ದೇಶದ ಭಯೋತ್ಪಾದನಾ ವಿರೋಧಿ ನಿಲುವನ್ನು ಪ್ರತಿನಿಧಿಸುವ ಸರ್ಕಾರದ ಆಪರೇಷನ್ ಸಿಂಧೂರ್ ನಿಯೋಗದ ಭಾಗವಾಗಿದ್ದರು.

ವನತಿ ಶ್ರೀನಿವಾಸನ್:
ವನತಿ ಶ್ರೀನಿವಾಸನ್ ಅವರನ್ನು ಸಹ ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. ತಮಿಳುನಾಡಿನ ವಕೀಲೆ, ರಾಜಕಾರಣಿ ಆಗಿರುವ ಅವರು ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಕೊಯಮತ್ತೂರು ದಕ್ಷಿಣವನ್ನು ಪ್ರತಿನಿಧಿಸುತ್ತಿದ್ದಾರೆ. 1993ರಲ್ಲಿ ಬಿಜೆಪಿಗೆ ಸೇರಿದ ನಂತರ ವನತಿ ಅವರು ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡಿನ ಉಪಾಧ್ಯಕ್ಷೆ ಸೇರಿದಂತೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2020ರಲ್ಲಿ ಪಕ್ಷವು ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತು. 2022ರಲ್ಲಿ ಅವರು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾದರು. ವಿಶೇಷವಾಗಿ ಆ ಸ್ಥಾನದಲ್ಲಿದ್ದ ಮೊದಲ ತಮಿಳು ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!