ಹೈದರಾಬಾದ್: ತೆಲಂಗಾಣದ (Telangana) ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ (Factory Blast) ಸಾವನ್ನಪ್ಪಿದವರ ಸಂಖ್ಯೆ ಇಂದಿಗೆ 42 ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಹೆಚ್ಚಿನ ಶವಗಳು ಪತ್ತೆಯಾಗಿವೆ.
ಇದಕ್ಕೂ ಮೊದಲು ಸಾವನ್ನಪ್ಪಿದವರ ಸಂಖ್ಯೆ 34 ಇತ್ತು. ಅವಶೇಷಗಳನ್ನು ತೆಗೆದುಹಾಕುವಾಗ ಹಲವಾರು ಶವಗಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಲೇ ಇದೆ.
ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತ ಇನ್ನೂ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಂಗಳವಾರ ಬೆಳಿಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಸೋಮವಾರ, ಶಂಕಿತ ರಿಯಾಕ್ಟರ್ ಸ್ಫೋಟದಿಂದಾಗಿ ಪಶಮೈಲಾರಂನಲ್ಲಿರುವ ಸಿಗಾಚಿ ರಾಸಾಯನಿಕ ಉದ್ಯಮದಲ್ಲಿ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿತು.
ಘಟನೆ ನಡೆದ ಸಮಯದಲ್ಲಿ ಕಾರ್ಖಾನೆಯಲ್ಲಿ ಸುಮಾರು 90 ಕಾರ್ಮಿಕರು ಇದ್ದರು. ಸ್ಫೋಟ ಸಂಭವಿಸಿದ ಕೂಡಲೇ ಕಾರ್ಖಾನೆಯ ಆಡಳಿತ ಮಂಡಳಿಯವರು ಪೊಲೀಸರು ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ 10 ಅಗ್ನಿಶಾಮಕ ದಳದ ವಾಹನ ಹಾಗೂ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಖಾನೆಯಲ್ಲಿನ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ಪರಿಹಾರವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಘೋಷಿಸಲಾಗಿದೆ.
ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿ ಮಾತನಾಡಿರುವ ಸಿಎಂ ರೇವಂತ್ ರೆಡ್ಡಿ, ಘಟನೆಯಲ್ಲಿ ಕಾರ್ಖಾನೆಯಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರ ರಕ್ಷಣೆಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆಗೆ ಕ್ರಮ ನಡೆಸುವಂತೆ ಕೂಡ ತಿಳಿಸಲಾಗಿದೆ ಎಂದಿದ್ದಾರೆ.
ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ರಾಸಾಯನಿಕ ಕ್ರಿಯೆಯಿಂದ ಇದು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.