ಮಂಗಳೂರು: “ತುಳುನಾಡನ್ನು ರಾಜ್ಯದಲ್ಲಿ ನಂಬರ್ ವನ್ ಅಭಿವೃದ್ಧಿ ಹೊಂದಿದ ಕ್ಷೇತ್ರವನ್ನಾಗಿ ಮಾಡುವುದು, ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಹಾಗೂ ಸಸಿಹಿತ್ಲು ಬೀಚನ್ನು ಏಷ್ಯಾದ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ತಾಣವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಈ ವಿಶ್ವ ಯೋಗ ದಿನಾಚರಣೆಯಲ್ಲಿ ಮಾಡೋಣ“ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಅವರು ಸೋಮೇಶ್ವರದ ಸೋಮನಾಥ ದೇವಾಲಯದ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ, ʻಯೋಗ ವಿದ್ ಯೋಧʼ ಎಂಬ ಧ್ಯೇಯದೊಂದಿಗೆ ಆಯೋಜಿಸಿದ ಯೋಗಾಸನದ ಮುಂಚೆ ಯೋಗಪಟುಗಳನ್ನು ಉದ್ದೇಶಿಸಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಒಂದು ಸಾಧ್ಯತೆಗಳ ಸಾಗರವಾಗಿದೆ. ಇದನ್ನು ಸಾಧಿಸಲು ಸಂಕಲ್ಪ ಮಾಡೋಣ. ಆದರೆ ಇದಕ್ಕೆ ಭಗವಂತನ ಆಶೀರ್ವಾದ ಮುಖ್ಯ. ʻಯೋಗ ವಿದ್ ಯೋಧʼ ಎಂಬ ಧ್ಯೇಯದೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ದೇವರ ಆಶೀರ್ವಾದ ಮುಖ್ಯ ಎಂಬ ಕಾರಣದೊಂದಿಗೆ ಸೋಮನಾಥ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಸಿಹಿತ್ಲು ಬೀಚ್ ಏಷ್ಯಾಖಂಡದಲ್ಲಿಯೇ ʻಅಡ್ವಂಚರಸ್ʼ ಬೀಚ್ ಆಗಿದ್ದು, ಇಲ್ಲಿ ವಾಟರ್ ಸ್ಪೋರ್ಟ್ಸ್ ಮಾಡುವ ಉದ್ದೇಶವಿದೆ. ಅದಕ್ಕಾಗಿ ಕಳೆದ ವರ್ಷ ಸಸಿಹಿತ್ಲು ಬೀಚ್ ಆಯ್ಕೆ ಮಾಡಿದ್ದೆವು. ಅದಕ್ಕೆ ದೇವರ ಕೃಪೆ ಸಿಗಲು ಸೋಮನಾಥ ಕ್ಷೇತ್ರ ಆಯ್ಕೆ ಮಾಡಿದೆವು. ಯಾಕೆಂದರೆ ಭಾರತ ಪುನರುತ್ಥಾನ ಹೊಂದಿರುವುದೇ ಗುಜರಾತ್‌ನಲ್ಲಿ ಸೋಮನಾಥ ಮಂದಿರ ಪುನರ್ ಸ್ಥಾಪನೆಗೊಂಡ ನಂತರವೇ ಎಂದು ಚೌಟ ಹೇಳಿದರು.
ಯೋಗಾಸನ ನಮ್ಮ ದಿನ ನಿತ್ಯದ ರೂಢಿಯಾಗಬೇಕು. ಈ ಯೋಗವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವ ಕೆಲಸ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ಚೌಟ ಹೇಳಿದರು.
ಯೋಗಾಸನದಲ್ಲಿ ಯೋಧರು, ನೀವೃತ್ತ ಯೋಧರು, ಸಾರ್ವಜನಿಕರು, ಶಾಲಾ ಮಕ್ಕಳು ಭಾಗವಹಿಸಿದ್ದರು. ಉಪನ್ಯಾಸಕ ಅರುಣ್ ಉಳ್ಳಾಲ ಪ್ರಾರ್ಥಿಸಿದ ಬಳಿಕ ಯೋಗಪಟುಗಳು ಯೋಗ ಮಾಡಿದರು. ಸಂಸದ ಬ್ರಿಜೇಶ್ ಚೌಟ ಯೋಗಾಸನ ಮಾಡಿದರು. ಅಂತಾರಾಷ್ಟ್ರೀಯ ಯೋಗ ಪಟು ಶ್ರದ್ಧಾ ಸಂದೇಶ್ ಶೆಟ್ಟಿ ನಿರ್ದೇಶನದಲ್ಲಿ ಯೋಗಾಸನ ಕಾರ್ಯಕ್ರಮ ನಡೆಯಿತು.