ಜುಗಾರಿ: ಮೂರನೇ ವ್ಯಕ್ತಿ ಮೂಲಕ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಪಿಎಸ್‌ಐ ಅಮಾನತು

ಮಂಗಳೂರು: ಜುಗಾರಿ ಆಡುತ್ತಿದ್ದ ವ್ಯಕ್ತಿ ಜೊತೆ ಮೂರನೇ ವ್ಯಕ್ತಿ ಮೂಲಕ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಪಿಎಸ್‌ಐ ಓರ್ವರನ್ನು ಅಮಾನತು ಮಾಡಲಾಗಿದೆ. ವಿಟ್ಲ ಪೊಲೀಸ್‌ ಠಾಣೆಯ ಪಿಎಸ್‌ಐ ಕೌಶಿಕ್‌ ಬಿ.ಸಿ. ಅಮಾನತುಗೊಂಡವರು.


ಪ್ರಕರಣದ ವಿವರ: ದಿನಾಂಕ 08.05.2025 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್‌ ಠಾಣೆಯ ಪಿಎಸ್‌ಐ ಕೌಶಿಕ್ ಬಿ.ಸಿ ಅವರು ದಾಳಿ ಮಾಡಿದಾಗ, ಘಟನಾ ಸ್ಥಳದಲ್ಲಿ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗದದ್ದಲ್ಲದೆ, ಸ್ಥಳದಲ್ಲಿ ಮೋಟಾರು ಸೈಕಲ್ ಕಂಡುಬಂದಿತ್ತು.

ಆದರೆ ಪಿಎಸ್ಐ ಕೌಶಿಕ್ ಬಿ.ಸಿ. ಈ ಬಗ್ಗೆ ಕಾನೂನಾತ್ಮಕ ಕ್ರಮ ಜರುಗಿಸದೇ ಬೈಕ್ ಮಾಲಕನಿಗೆ ಕರೆಮಾಡಿ ಠಾಣೆಗೆ ಬರಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬೈಕ್‌ ಮಾಲಿಕನಿಗೆ ಮೂರನೇ ವ್ಯಕ್ತಿಯ ಮೂಲಕ ಹಣದ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂಭಾಷಣೆಯು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರವಾಗಿದೆ. ಹೀಗಾಗಿ ಅಧಿಕಾರಿಯ ಮೇಲೆ ದಿನಾಂಕ 12.05.2025 ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!