ಬಹುಭಾಷಾ ನಟ ಶೈನ್ ಟಾಮ್ ಚಾಕೋ ಕಾರು-ಟ್ರಕ್ ನಡುವೆ ಭೀಕರ ಅಪಘಾತ: ತಂದೆ ಸಾವು

ಕೊಯಮತ್ತೂರು: ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ (41) ಅವರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಧರ್ಮಪುರಿ ಜಿಲ್ಲೆಯ ಪಾಲಕೋಡ್‌ನ ಪರೈಯೂರ್ ಬಳಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದಾರೆ. ಈ ದುರಂತದಲ್ಲಿ ನಟ ಮತ್ತು ಅವರ ತಾಯಿ ತೀವ್ರವಾಗಿ ಗಾಯಗೊಂಡಿದ್ದು,ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ


ಗಾಯಗೊಂಡ ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಯನ್ನು ತಕ್ಷಣವೇ ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಶೈನ್‌ಗೆ ಗಂಭೀರವಾದ ಗಾಯಗಳಾಗಿದ್ದು, ಶಸ್ತ್ರಕ್ರಿಯೆಯ ಅಗತ್ಯವಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಶೈನ್‌ನ ತಂದೆಯ ಸಾವು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

ಶೈನ್ ಟಾಮ್ ಚಾಕೊ, ಮಲಯಾಳಂ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಜನಪ್ರಿಯರಾಗಿದ್ದಾರೆ. ‘ಡಾಕು ಮಹರಾಜ್’, ‘ದಸರಾ’, ‘ರಾಬಿನ್ ಹುಡ್’, ‘ಬೀಸ್ಟ್’ ಸೇರಿದಂತೆ ಹಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಘಟನೆಯಿಂದ ಅವರ ಅಭಿಮಾನಿಗಳು ಆತಂಕಗೊಂಡಿದ್ದು, ಶೈನ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಶೈನ್ ಟಾಮ್ ಚಾಕೊ ಅವರ ತಂದೆಯ ನಿಧನಕ್ಕೆ ಸಿನಿಮಾ ರಂಗದ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಧರ್ಮಪುರಿ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಚಾಲಕನ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯುತ್ತಿದೆ.

error: Content is protected !!