ಬೆಂಗಳೂರು: ಕರ್ನಾಟಕದಲ್ಲಿ ಕಮಲ್ ಹಾಸನ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ `ಕನ್ನಡತಿ’ ಧಾರವಾಹಿ ಖ್ಯಾತಿಯ ರಂಜನಿ ರಾಘವನ್ , ಕಮಲ್ ಹಾಸನ್ ಅವರಿಗೆ ತಾವು ಬರೆದ ಕನ್ನಡದ ಪುಸ್ತಕವನ್ನು ನೀಡಿರುವ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ರಂಜನಿ ರಾಘವನ್ ತಮ್ಮ ಖಾತೆಯಲ್ಲಿ ಕಮಲ್ ಸರ್ಗೆ `ಕನ್ನಡ’ ಪುಸ್ತಕ ಎಂದು ಬರೆದುಕೊಂಡು ಕಮಲ್ ಹಾಸನ್ ಅವರಿಗೆ ತಾವು ಬರೆದಿರುವ `ಸ್ಟೈಲ್ ರೈಟ್’ ಮತ್ತು `ಕಥೆ ಡಬ್ಬಿ’ ಎಂಬ ಪುಸ್ತಕಗಳನ್ನು ನೀಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಆದರೆ ಅವರು ಈ ಪುಸ್ತಕವನ್ನು ಯಾವಾಗ ನೀಡಿದ್ದಾರೆ ಎಂಬುದರ ಬಗ್ಗೆ ಉಲ್ಲೇಖಿಸಿಲ್ಲ. ಕನ್ನಡ ಮೇಷ್ಟ್ರಮ್ಮ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೈ ಕನ್ನಡಾಂಬೆ, ಕಮಲ್ಗೆ ಕನ್ನಡ ಪಾಠ ಕಲಿಸಿದ ಕನ್ನಡತಿ ಎಂಬೆಲ್ಲಾ ಕಾಮೆಂಟ್ ಸುರಿಮಳೆಗಳನ್ನೇ ಹರಿಸಿದ್ದಾರೆ.
ರಂಜನಿ ರಾಘವನ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರವಾಹಿಯಲ್ಲಿ ಕನ್ನಡ ಉಪನ್ಯಾಸಕಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಕನ್ನಡದ ಮೇಷ್ಟ್ರಾಗಿ ಅಚ್ಚೆ ಹಾಕಿದ್ದರು. ಈ ಧಾರವಾಹಿಯ ಬಳಿಕ ಅವರು ನಟನೆಯಿಂದ ದೂರ ಉಳಿದು ನಿರ್ದೇಶದತ್ತ ಹೆಜ್ಜೆ ಇಟ್ಟಿದ್ದಾರೆ. `ಡಿ ಡಿ ಡಿಕ್ಕಿ’ ಚಿತ್ರವನ್ನು ನಿರ್ದೇಶಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.