ಕೊಚ್ಚಿ: ಕೇರಳ ಹೈಕೋರ್ಟ್ ಸೋಮವಾರ ಟ್ರಾನ್ಸ್ಜೆಂಡರ್ ದಂಪತಿ ತಮ್ಮ ಮಗುವಿಗೆ ʻತಂದೆ’ ಮತ್ತು ʻತಾಯಿ’ ಬದಲಿಗೆ ʻಪೋಷಕರು’ ಎಂದು ಗುರುತಿಸುವ ಪರಿಷ್ಕೃತ ಜನನ ಪ್ರಮಾಣಪತ್ರ ನೀಡುವ ಮನವಿಗೆ ಅನುಮತಿ ನೀಡಿದೆ. ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಎ ಎ ಅವರು ಈ ಮಹತ್ವದ ಆದೇಶ ನೀಡಿದ್ದು ಈ ಮೂಲಕ ಲಿಂಗ ಹಕ್ಕುಗಳ ಮಹತ್ವದ ಕ್ರಮ ತೆಗೆದುಕೊಂಡಿದ್ದಾರೆ.
ಭಾರತದ ಮೊದಲ ಬಹಿರಂಗ ಟ್ರಾನ್ಸ್ಜೆಂಡರ್ ಪೋಷಕರು ಎಂದು ಫೆಬ್ರವರಿ 2023 ರಲ್ಲಿ ಭಾರೀ ಸುದ್ದಿಯಾಗಿದ್ದ ಟ್ರಾನ್ಸ್ಜೆಂಡರ್ ಪುರುಷ ಜಹಾದ್ ಮತ್ತು ಟ್ರಾನ್ಸ್ಜೆಂಡರ್ ಮಹಿಳೆ ಜಿಯಾ ಪಾವಲ್ ಅವರು ಅರ್ಜಿ ಸಲ್ಲಿಸಿದ್ದಾರೆ. ಕೇರಳ ಜನನ ಮತ್ತು ಮರಣ ನೋಂದಣಿ ನಿಯಮಗಳು, 1999 ರ ಅಡಿಯಲ್ಲಿ ಕೋಝಿಕ್ಕೋಡ್ ಕಾರ್ಪೊರೇಷನ್ ನೀಡಿದ ಜನನ ಪ್ರಮಾಣಪತ್ರದಲ್ಲಿ ಲಿಂಗ-ತಟಸ್ಥ ಸ್ವರೂಪವನ್ನು ಕೋರಿ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
“ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ನಮ್ಮಂತಹ ಟ್ರಾನ್ಸ್ಜೆಂಡರ್ ದಂಪತಿ ಈಗ ʻತಾಯಿ’ ಮತ್ತು ʻತಂದೆ’ ಯಂತಹ ಲಿಂಗ-ನಿರ್ದಿಷ್ಟ ಗುರುತುಗಳ ಬದಲಿಗೆ ‘ಪೋಷಕರು’ ಎಂದು ಗುರುತಿಸಿಕೊಳ್ಳಲು ಆಯ್ಕೆ ಮಾಡಬಹುದು. ಎಂದು ಜಿಯಾ ತಿಳಿಸಿದರು.
ದಂಪತಿ ಪ್ರಕಾರ, ನಿಗಮವು ಆರಂಭದಲ್ಲಿ ಜನನ ಪ್ರಮಾಣಪತ್ರದಲ್ಲಿ ಜಿಯಾ ಪಾವಲ್ ಅವರನ್ನು ತಂದೆ ಮತ್ತು ಜಹ್ಹಾದ್ ಅವರನ್ನು ತಾಯಿ ಎಂದು ಪಟ್ಟಿ ಮಾಡಿ, ಆವರಣದಲ್ಲಿ ʻಟ್ರಾನ್ಸ್ಜೆಂಡರ್’ ಎಂದು ಬರೆಯಲಾಗಿತ್ತು. ಅರ್ಜಿದಾರರು ಈ ವರ್ಗೀಕರಣವನ್ನು ಆಕ್ಷೇಪಿಸಿ, ಇದು ತಮ್ಮ ಲಿಂಗ ಗುರುತನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು.
ಜಿಯಾ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗಿದ್ದಳು. ಜಹಾದ್ ಹೆಣ್ಣಾಗಿ ಹುಟ್ಟಿ ಪುರುಷನಾಗಿ ಬದಲಾಗಿದ್ದಳು. ಮಹಿಳೆಯಿಂದ ಪುರುಷನಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಸಂದರ್ಭದಲ್ಲಿ ಗರ್ಭಾಶಯ ಮತ್ತು ಇತರ ಕೆಲವು ಅಂಗಗಳನ್ನು ತೆಗೆಯದ ಕಾರಣ ಜಹಾದ್ ಗರ್ಭಧರಿಸಿದ್ದರು. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಜಿಯಾ ಪಾವಲ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ಮಗುವಿಗೆ ಇದೀಗ ಎರಡು ವರ್ಷ ತುಂಬುತ್ತಿದ್ದು, ಜಿಯಾ-ಜಹಾದ್ ಪಾಲನೆ- ಪೋಷಣೆಯಲ್ಲಿ ಬೆಳೆಯುತ್ತಿದೆ.