ಕಾಸರಗೋಡು: ಕೇರಳದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ನಮ್ಮ ಗಡಿ ಜಿಲ್ಲೆ ಕಾಸರಗೋಡಲ್ಲೂ ಪ್ರಳಯಾಂತಕಾರಿಯಾಗಿ ಪರಿಣಮಿಸಿದೆ. ಪ್ರವಾಹಕ್ಕಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಧೂರು ಪಟ್ಲ ಮೊಗರ್ ಎಂಬಲ್ಲಿ ನಡೆದಿದೆ.
ಪಾಲಕುನ್ನು ಕರಿಪ್ಪೊಡಿಯ ಸಾದಿಕ್ (39) ಮೃತಪಟ್ಟವರು. ಪತ್ನಿ ಮನೆಗೆ ಬಂದಿದ್ದ ಇವರು ಸಮೀಪದ ಸಂಬಂಧಿಕರೋರ್ವರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರವಾಹಕ್ಕೆ ಸಿಲುಕಿ ನೀರುಪಾಗಿದ್ದಾರೆ. ಆದರೆ ಜೊತೆಗಿದ್ದ ಪತ್ನಿಯ ಸಹೋದರ ಮೊಯ್ದು ಅಪಾಯದಿಂದ ಪಾರಾಗಿದ್ದಾರೆ.
ಇವರಿಬ್ಬರು ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕರಿಪ್ಪೊಡಿಯ ಸಾದಿಕ್ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಮೊಯ್ದು ಅವರನ್ನು ರಕ್ಷಿಸಲು ಮುಂದಾದರೂ ತಾನೂ ಕೂಡಾ ಪ್ರವಾಹದಲ್ಲಿ ಸಿಲುಕಿದ್ದು, ಕೊನೆಗೂ ದಡ ಸೇರುವಲ್ಲಿ ಸಫಲರಾಗಿದ್ದಾರೆ.
ಸಾದಿಕ್ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಶೋಧ ನಡೆಸಿ ಘಟನೆ ನಡೆದ ಅಲ್ಪ ದೂರದಿಂದ ಮೃತದೇಹವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.