ಮುಂಬೈ: ಕೆಟ್ಟ ವಾತಾವರಣ ಮತ್ತು ಆಯೋಜಕರ ಕಿರುಕುಳದಿಂದಾಗಿ ʻಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ –2024ʼರ ವಿಜೇತೆ ಭಾರತದ ರೇಚಲ್ ಗುಪ್ತಾ ಅವರು, ಕಿರೀಟವನ್ನು ತ್ಯಜಿಸಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
ಸೌಂದರ್ಯ ಸ್ಪರ್ಧೆಗಳ ಪೈಕಿ 2024ರಲ್ಲಿ ಭಾರತಕ್ಕೆ ಮೊದಲ ‘ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್’ ಪ್ರಶಸ್ತಿ ದಕ್ಕಿತ್ತು. 21 ವರ್ಷದ ರೇಚಲ್ ಗುಪ್ತಾ ಅವರು ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು. ಆದರೆ, ಸ್ಪರ್ಧೆ ಮುಗಿದು ಕೇವಲ 7 ತಿಂಗಳಿಗೆ ಕಿರೀಟ ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಮೇ 28ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಿರೀಟ ತ್ಯಜಿಸಿರುವುದರ ಬಗ್ಗೆ ಮಾಹಿತಿ ನೀಡಿದ್ದ ರೇಚಲ್, ಕೆಟ್ಟ ವಾತಾವರಣ ಮತ್ತು ಆಯೋಜಕರ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದರು. ಮರುದಿನ, ‘ದಿ ಟ್ರೂತ್ ಎಬೌಟ್ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ – ಮೈ ಸ್ಟೋರಿ’ ಶೀರ್ಷಿಕೆಯಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಸ್ಪರ್ಧೆಯ ನಂತರ ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದರು.
‘ನಿಜ ಹೇಳಬೇಕೆಂದರೆ ನಾನು ಬದುಕುತ್ತೇನೋ ಅಥವಾ ಸಾಯುತ್ತೇನೋ ಅನ್ನೋದು ಅವರಿಗೆ(ಆಯೋಜಕರಿಗೆ) ಮುಖ್ಯವಲ್ಲ. ದೇಹವನ್ನು ಅವರು ಇಷ್ಟಪಡುವ ರೀತಿ ತೆಳ್ಳಗೆ ಇಟ್ಟುಕೊಳ್ಳುವುದು ಮತ್ತು ಅವರ ಕಾರ್ಯಕ್ರಮಗಳಲ್ಲಿ ಹಲ್ಲು ಕಿರಿಯುತ್ತಾ ಭಾಗವಹಿಸುವುದು ಮಾತ್ರ ಅವರಿಗೆ ಬೇಕಾಗಿರುವುದು’ ಎಂದು ಕಿಡಿಕಾರಿದ್ದಾರೆ.
‘ಟಿಕ್‌ಟಾಕ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ನನ್ನನ್ನು ಸೇಲ್ಸ್‌ಗರ್ಲ್‌ನಂತೆ ಬಳಸಿಕೊಳ್ಳುತ್ತಿದ್ದರು. ಅವರಿಗಾಗಿ ನಾನು ಹಣ ಸಂಪಾದಿಸಿಕೊಡಬೇಕು. ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.. ಇಷ್ಟೇ ನನ್ನ ಬದುಕಾಗಿತ್ತು’ ಎಂದು ಕಂಬನಿ ಸುರಿಸಿದ್ದಾರೆ.
ಇದೇ ವೇಳೆ ಲೈಂಗಿಕ ದೌರ್ಜನ್ಯದ ಬಗ್ಗೆ ಆರೋಪ ಮಾಡಿರುವ ಅವರು, ಒಂದು ಬಾರಿ ಅವರು(ಆಯೋಜಕರು) ತಮ್ಮ ಪ್ರತಿನಿಧಿಯನ್ನು ನನ್ನ ಬಳಿಗೆ ಕಳುಹಿಸಿದ್ದು, ಸಲಹೆ ಕೊಡುವ ನೆಪದಲ್ಲಿ ಅವನು ನನ್ನ ದೇಹದ ಭಾಗಗಳನ್ನು ಮುಟ್ಟಲು ಪ್ರಾರಂಭಿಸುತ್ತಾನೆ. ನೀನು ಇಲ್ಲಿ ತೂಕ ಇಳಿಸಿಕೊಳ್ಳಬೇಕು ಎಂದು ಆತ ನನ್ನ ದೇಹ ಮುಟ್ಟಿ ಹೇಳುವಾಗ ನನಗೆ ತುಂಬಾ ಅಸಹ್ಯವೆನಿಸಿತು’ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ರೇಚಲ್ ಅವರ ಆರೋಪವನ್ನು ನಿರಾಕರಿಸಿರುವ ಆಯೋಜಕರು, ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್– 2024ರ ವಿಜೇತೆ ಎಂಬ ಟೈಟಲ್ ಬಳಸಲು ಅಥವಾ ಕಿರೀಟವನ್ನು ಧರಿಸಲು ರೇಚೆಲ್ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.